ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೂ ಕೊರೊನಾ
ಮೈಸೂರು

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೂ ಕೊರೊನಾ

August 5, 2020

ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲು
ಸಿಎಂ, ಮಾಜಿ ಸಿಎಂಗೆ ಒಬ್ಬರೇ ವೈದ್ಯರು
ಬೆಂಗಳೂರು ಆ.4(ಕೆಎಂಶಿ)-ಕೊರೊನಾ ಸೋಂಕು ಸಾಮಾನ್ಯ ಜನತೆಗೆ ಅಷ್ಟೇ ಅಲ್ಲದೆ ರಾಜಕೀಯ ನಾಯಕರನ್ನು ಬೆನ್ನತ್ತಿದೆ. ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಪ್ರತಿಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸೋಂಕು ತಗುಲಿದೆ. ಸಿದ್ದರಾಮಯ್ಯ ಅವರನ್ನು ಸಹ ಮಣಿಪಾಲ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ತಮ್ಮ ಆರೋಗ್ಯದ ಬಗ್ಗೆ ಸಿದ್ದರಾಮಯ್ಯನವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಕೊರೊನಾ ತಪಾಸಣೆಯಲ್ಲಿ ಪಾಸಿಟಿವ್ ಬಂದಿದೆ. ರೋಗಲಕ್ಷಣ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ನನ್ನ ಸಂಪರ್ಕದಲ್ಲಿದ್ದವರು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಎರಡು ವಾರಗಳ ಹಿಂದೆ ಮೂತ್ರಕೋಶದ ಸೋಂಕಿಗೆ ಒಳಗಾಗಿದ್ದ ನಮ್ಮ ತಂದೆಯವರಿಗೆ ನಿನ್ನೆ ಬೆಳಗ್ಗೆಯಿಂದ ಜ್ವರ ಕಾಣಿಸಿ ಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರ ಪುತ್ರ ಶಾಸಕ ಡಾ. ಯತೀಂದ್ರ ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲು ಮಾಡಿದ ನಂತರ ಅವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಅವರ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದರು. ಮುಖ್ಯಮಂತ್ರಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೇ ಸಿದ್ದರಾಮಯ್ಯ ಅವÀರಿಗೂ ಚಿಕಿತ್ಸೆ ನೀಡುತ್ತಿದ್ದಾರೆ. ರಾಜ್ಯದ ಇಬ್ಬರು ಮಹಾನ್ ನಾಯಕರುಗಳಿಗೆ ಸೋಂಕು ತಗುಲುತ್ತಿದ್ದಂತೆ ರಾಜಕೀಯ ನಾಯಕರು ತಲ್ಲಣಗೊಂಡಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿರುವ ಮಂತ್ರಿಗಳು ಸೇರಿದಂತೆ ರಾಜಕೀಯ ನಾಯಕರು ವಿವಿಧ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸೋಂಕು ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಯಡಿಯೂರಪ್ಪ, ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಸೇರಿದಂತೆ ಹಲವು ಗಣ್ಯರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Translate »