ಗುಣಮುಖರಾದ ಮೈಸೂರಿನ ಸಿವಿ ರಸ್ತೆ ನಿವಾಸಿಯ ಬೇಸರದ ನುಡಿ
ಮೈಸೂರು, ಆ.26(ವೈಡಿಎಸ್)- ಮನೆ, ಕಚೇರಿ, ಬೀದಿಗಳಿಗೆಲ್ಲಾ ಸ್ಯಾನಿಟೈಸ್ ಮಾಡೋಕೆ ಪೌರಕಾರ್ಮಿಕರು ಬೇಕು. ಆದರೆ, ನಂಗೆ ಕೊರೊನಾ ಬಂದಾಗ ಯಾವೊಬ್ಬ ಅಧಿಕಾರಿಯೂ ಬಂದು ಆರೋಗ್ಯ ವಿಚಾರಿಸ್ಲಿಲ್ಲ. ಕುಟುಂಬಕ್ಕೆ ದಿನಸಿ ಪದಾರ್ಥಗಳನ್ನೂ ನೀಡ್ಲಿಲ್ಲ…
ಅಲ್ಲಿ ಆ ಮನೆ, ಇಲ್ಲಿ ಈ ಕಚೇರಿಗೆ ಸ್ಯಾನಿಟೈಸ್ ಮಾಡೆಂದು ಹೇಳುವ ಅಧಿಕಾರಿಗಳು, ನಂಗೆ ಕೊರೊನಾ ಪಾಸಿಟಿವ್ ಆದಾಗ ಆರೋಗ್ಯ ವಿಚಾರಿಸ್ಲ್ಲಿಲ್ಲ. ಕ್ವಾರಂಟೈನ್ ಆಗಿದ್ದ ನನ್ನ ಕುಟುಂಬಕ್ಕೆ ದಿನಸೀನೂ ನೀಡ್ಲಿಲ್ಲ. ಇದಕ್ಕೆ ಕೊರೊನಾ ವಾರಿಯರ್ಸ್ ಎಂದು ಕರೆಸ್ಕೋಬೇಕಾ?
ಕೊರೊನಾ ಪಾಸಿಟಿವ್ ಬಂದು ಈಗ ಗುಣಮುಖರಾಗಿರುವ ಮೈಸೂರಿನ ಸಿವಿ ರಸ್ತೆ ನಿವಾಸಿ(ರೋಗಿ ಸಂಖ್ಯೆ710)ಯ ಬೇಸರದ ನುಡಿಗಳು ಇವು.
ಕಳೆದ 4 ತಿಂಗ್ಳಿಂದ ಗುತ್ತಿಗೆ ಆಧಾರದಲ್ಲಿ ಕಂಟೈನ್ಮೆಂಟ್ ಜೋನ್‍ಗಳಲ್ಲಿನ ಮನೆ, ಬೀದಿ, ಕಚೇರಿಗಳಿಗೆ ಸ್ಯಾನಿಟೈಸ್ ಮಾಡುವ ಕೆಲಸ ಮಾಡ್ಕೊಂಡಿದ್ದೆ. ನಂಗೆ ಯಾವ್ದೇ ಕೊರೊನಾ ಲಕ್ಷಣ ಇಲ್ಲದಿದ್ರು ಜು.8ರಂದು ಕೆ.ಆರ್.ಆಸ್ಪತ್ರೇಲಿ ಪರೀಕ್ಷೆ ಮಾಡಿಸ್ದೆ. ಮರುದಿನ ಸಂಜೆ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಕರೆ ಮಾಡಿ ಪಾಸಿಟಿವ್ ಬಂದೈತೆ. ನಿಮ್ಮನ್ನು ಆಸ್ಪತ್ರೆಗೆ ಕರ್ಕೊಂಡೊಗಕ್ಕೆ ಆಂಬುಲೆನ್ಸ್ ಬರ್ತದೆ. ಮನೆಯಲ್ಲೇ ಇರಿ ಅಂತ ಹೇಳಿದ್ರು. ಯಾವುದೇ ಲಕ್ಷಣ ಇಲ್ಲದಿದ್ರು ಪಾಸಿಟಿವ್ ಬಂತಲ್ಲ ಎಂದು ಭಯವಾಯ್ತು.
ಆಂಬುಲೆನ್ಸ್‍ನಲ್ಲಿ ಮೇಟಗಳ್ಳಿಯ ಕೋವಿಡ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಮೂರು ದಿನ ಚಿಕಿತ್ಸೆ ಪಡೆದು, ನಂತರ ಇಎಸ್‍ಐ ಆಸ್ಪತ್ರೆಗೆ ಕಳಿಸಿದ್ರು. ಅಲ್ಲಿ 11 ದಿನ ಚಿಕಿತ್ಸೆ ಪಡೆದು ಗುಣಮುಖನಾದೆ. ಡಿಸ್ಚಾರ್ಜ್ ಮಾಡಿದ್ರು. ಮನೆಯಲ್ಲಿ 14 ದಿನ ಕ್ವಾರಂಟೈನ್ ಇದ್ದೆ. ಅದೂ ಈಗ ಮುಕ್ತಾಯವಾಯ್ತು.
ಹಿಯ್ಯಾಳಿಸುತ್ತಿದ್ದರು: ಡಿಸ್ಚಾರ್ಜ್ ಆಗಿ ಮನೆಗೆ ಹೋದಾಗ ನೆರೆಯವ್ರು ಇನ್ನೂ ಸೋಂಕಿತನಂತೇ ನೋಡ್ತಿದ್ರು. ಅವನೊಂದಿಗೆ ಹೆಚ್ಚು ಮಾತಾಡ್ಬೇಡಿ. ಅವ್ನು ಆಸ್ಪತ್ರಿಂದ ಬಂದವ್ನೆ ಎಂದು ಹಿಯ್ಯಾಳಿಸ್ತಿದ್ರು. ಇದರಿಂದ ಮನಸ್ಸಿಗೆ ನೋವಾಗ್ತಿತ್ತು.
ದಿನಸಿ ತಂದುಕೊಡ್ಲಿಲ್ಲ: ಜೀವದ ಹಂಗುತೊರ್ದು ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡ್ತಿದ್ದೆ. ನಂಗೆ ಪಾಸಿಟಿವ್ ಬಂದಾಗ ಮನೆಯವ್ರನ್ನ ಕ್ವಾರಂಟೈನ್ ಮಾಡಿದ್ರು. ಈ ವೇಳೆ ಅಕ್ಕಪಕ್ಕದ ನಿವಾಸಿಗಳಾಗಲಿ, ಅಧಿಕಾರಿಗಳಾಗಲಿ ದಿನಸಿ ಪದಾರ್ಥಗಳನ್ನು ತಂದುಕೊಡ್ಲಿಲ್ಲ ಎಂದು ಬೇಸರದಿಂದಲೇ ನುಡಿದ ಅವರು, ಆದರೆ, ಇಲ್ಲಿನ ಪಾಲಿಕೆ ಸದಸ್ಯರು ದಿನಸಿ ಪದಾರ್ಥಗಳನ್ನು ನೀಡಿದ್ರು ಎಂದು ಸಮಾಧಾನ ವ್ಯಕ್ತಪಡಿಸಿದರು.