ಮೈಸೂರು, ಆ.26(ಪಿಎಂ)- ಜೆಎಸ್‍ಎಸ್ ಜನಶಿಕ್ಷಣ ಸಂಸ್ಥೆಯ ಅರೆಕಾಲಿಕ ವೃತ್ತಿ ಬೋಧಕರಿಗೆ ಬುಧವಾರ ಹೊಲಿಗೆ ಯಂತ್ರದ ಬೇಸಿಕ್ ದುರಸ್ತಿ ತರಬೇತಿ ನೀಡಲಾಯಿತು.
ಮೈಸೂರಿನ ಉದಯಗಿರಿಯ ಜನಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಿಳಾ ಪಾಲಿಟೆಕ್ನಿಕ್‍ನ ಮೆಕ್ಯಾನಿಕಲ್ ವಿಷಯದ ಸಂಪನ್ಮೂಲ ವ್ಯಕ್ತಿ ಪುಟ್ಟಸ್ವಾಮಿ, ಹೊಲಿಗೆ ಯಂತ್ರಗಳ ವಿವಿಧ ಭಾಗಗಳ ಜೋಡಿಸುವಿಕೆ ಮತ್ತು ದುರಸ್ತಿ ಸಂಬಂಧ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದಿಂದ ಅನುಮೋದನೆಯಾಗಿರುವ 2020-21ನೇ ಸಾಲಿನ ಉಡುಪು ತಯಾರಿಕೆ ತರಬೇತಿ ಪ್ರಾರಂಭಿಸಲು ಪೂರ್ವ ಸಿದ್ಧತೆಗಾಗಿ ಇಂದು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದಕ್ಕೂ ಮುನ್ನ ಜೆಎಸ್‍ಎಸ್ ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಡಿ.ಎಂ.ಶಶಿಕಲಾ ಕೋವಿಡ್-19ಗೆ ಸಂಬಂಧಿಸಿದ ಮುಂಜಾಗ್ರತಾ ಕ್ರಮಗಳೊಂದಿಗೆ ತರಬೇತಿ ಪಡೆಯುವ ಬಗ್ಗೆ ವಿವರಿಸಿದರು. 2ನೇ ಅಧಿವೇಶನದಲ್ಲಿ ಸುತ್ತೂರು ಶ್ರೀರಾಜೇಂದ್ರ ಸ್ವಾಮೀಜಿಯವರ 105ನೇ ಜಯಂತಿ ಮಹೋತ್ಸವದ ಅಂಗವಾಗಿ ಪ್ರಶ್ನೋತ್ತರ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ನಂತರ ಸ್ಯಾನಿಟೈಸರ್ ತಯಾರಿಕಾ ವಿಧಾನದ ಪ್ರಾತ್ಯಕ್ಷತೆ ನೀಡಲಾಯಿತು.
ತರಬೇತಿ ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಅರೆಕಾಲಿಕ ವೃತ್ತಿ ಬೋಧಕರು ಪಾಲ್ಗೊಂಡಿದ್ದರು. ಜೆಎಸ್‍ಎಸ್ ಜನಶಿಕ್ಷಣ ಸಂಸ್ಥೆ ನಿಕಟಪೂರ್ವ ನಿರ್ದೇಶಕ ಚೆನ್ನಬಸಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.