ವಾಟ್ಸಾಪ್ ಮೂಲಕ ಸಿಕ್ಕ ವಸ್ತುಗಳ ವಾರಸುದಾರರ ಪತ್ತೆ!
ಮೈಸೂರು

ವಾಟ್ಸಾಪ್ ಮೂಲಕ ಸಿಕ್ಕ ವಸ್ತುಗಳ ವಾರಸುದಾರರ ಪತ್ತೆ!

August 27, 2020

ಹುಣಸೂರು, ಆ.26- ವ್ಯಕ್ತಿಯೊಬ್ಬರು ತಮಗೆ ರಸ್ತೆಯಲ್ಲಿ ಸಿಕ್ಕಿದ ವಸ್ತುಗಳನ್ನು ಫೋಟೋ ತೆಗೆದು ವಾಟ್ಸಾಪ್ ಗ್ರೂಪ್‍ನಲ್ಲಿ ಅಪ್‍ಲೋಡ್ ಮಾಡುವ ಮೂಲಕ ವಾರಸುದಾರರನ್ನು ಪತ್ತೆ ಹಚ್ಚಿ ವಸ್ತುಗಳನ್ನು ಹಿಂತಿರುಗಿಸಿದ ಬಗ್ಗೆ ವರದಿಯಾಗಿದೆ.

ತಾಲೂಕಿನ ಗಾವಡಗೆರೆ ಗ್ರಾಮದ ಗಿರೀಶ್ ರಾವ್ ನಿಂಬಾಳ್ಕರ್, ತಮಗೆ ರಸ್ತೆಯಲ್ಲಿ ದೊರೆತ ವಸ್ತುಗಳನ್ನು ವಾರಸುದಾರರಿಗೆ ಸುರಕ್ಷಿತವಾಗಿ ಒಪ್ಪಿಸಿ, ಪ್ರಾಮಾಣಿಕತೆ ಮೆರೆದವರು.

ವಿವರ: ಹುಣಸೂರು ತಾಲೂಕು ಮಾರಗೌಡನಹಳ್ಳಿಯ ಗಣಪತಿ ಮತ್ತು ಮೇಘನಾ ದಂಪತಿ ಗೌರಿ ಹಬ್ಬಕ್ಕಾಗಿ ತಮ್ಮ ಮಗುವಿಗೆ ಕೆ.ಆರ್.ನಗರದಲ್ಲಿ ಬೆಳ್ಳಿ ಕಾಲ್ಚೈನು ಮತ್ತು ಬಟ್ಟೆ ಖರೀದಿಸಿದ್ದರು. ಅದರ ಅಳತೆ ಸರಿಯಾಗದ ಕಾರಣ ಅದನ್ನು ಬದಲಿಸಲು ಬೈಕ್‍ನಲ್ಲಿ ಕೆ.ಆರ್.ನಗರಕ್ಕೆ ತೆರಳುತ್ತಿದ್ದರು. ಗಾವಡಗೆರೆ ಪೆಟ್ರೋಲ್ ಬಂಕ್‍ನಲ್ಲಿ ಬೈಕ್‍ಗೆ ಪೆಟ್ರೋಲ್ ಹಾಕಿಸುವ ವೇಳೆ ಬೆಳ್ಳಿ ಕಾಲ್ಚೈನು ಮತ್ತು ಬಟ್ಟೆ ಇದ್ದ ಪ್ಲಾಸ್ಟಿಕ್ ಕವರ್ ನಾಪತ್ತೆಯಾಗಿರುವುದು ಕಂಡು ಬಂದಿದ್ದು, ಬೇರೆ ದಾರಿ ಕಾಣದೆ ದಂಪತಿ ಗ್ರಾಮಕ್ಕೆ ಹಿಂತಿರುಗಿದ್ದರು.

ಅದೇ ವೇಳೆ ಗಾವಡಗೆರೆ ಗ್ರಾಮದ ಗಿರೀಶ್‍ರಾವ್ ನಿಂಬಾಳ್ಕರ್, ಕೆ.ಆರ್. ನಗರದಿಂದ ಹುಣಸೂರಿಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಮಾರಗೌಡನಹಳ್ಳಿ ಗೇಟ್ ಬಳಿ ಅವರಿಗೆ ಈ ಪ್ಲಾಸ್ಟಿಕ್ ಕವರ್ ದೊರೆತಿದೆ. ಅವರು ಕವರ್‍ನಲ್ಲಿದ್ದ ವಸ್ತುಗಳನ್ನು ಫೋಟೋ ತೆಗೆದು ವಾಟ್ಸಾಪ್ ಮೂಲಕ ತಮ್ಮ ಸ್ನೇಹಿತ ಮಲ್ಲೇಗೌಡರಿಗೆ ರವಾನಿಸಿದ್ದಾರೆ. ಅವರು ಅದನ್ನು ವಾಟ್ಸಾಪ್ ಗ್ರೂಪ್‍ವೊಂದರಲ್ಲಿ ಅಪ್‍ಲೋಡ್ ಮಾಡಿದ್ದು, ಅದನ್ನು ಕಂಡ ಗಣಪತಿ ಮತ್ತು ಮೇಘನಾ ದಂಪತಿ, ಗಿರೀಶ್‍ರಾವ್ ನಿಂಬಾಳ್ಕರ್ ಅವರನ್ನು ಸಂಪರ್ಕಿಸಿ ತಮ್ಮ ವಸ್ತುಗಳು ಹಾಗೂ ಕವರ್‍ನಲ್ಲಿದ್ದ 2500 ರೂ. ನಗದು ಹಿಂಪಡೆದಿದ್ದಾರೆ.

Translate »