- ಅಂತರರಾಜ್ಯ, ಅಂತರ ಜಿಲ್ಲೆ ಗಡಿ ಸಂಪೂರ್ಣ ಬಂದ್
- ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮೆಚ್ಚುಗೆ
ಮಡಿಕೇರಿ, ಏ.2- ಕೊಡಗು ಜಿಲ್ಲೆ ಲಾಕ್‍ಡೌನ್ ಆಗಿ 10 ದಿನ ಕಳೆದಿದ್ದು, ಕೊರೊನಾ ಮಹಾಮಾರಿಯ ವಿರುದ್ಧ ಸಾರಿರುವ ಸಾಮೂಹಿಕ ಸಮರಕ್ಕೆ ಪುಟ್ಟ ಜಿಲ್ಲೆ ಕೊಡಗು ಸಂಪೂರ್ಣ ಬೆಂಬಲ ನೀಡುವ ಮೂಲಕ ಸ್ತಬ್ಧವಾಗಿದೆ. ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ಹಾಲು, ಪತ್ರಿಕೆಗಳನ್ನು ಕೊಳ್ಳಲು ಜನರಿಗೆ ಅವಕಾಶ ನೀಡಲಾಗಿದ್ದು, ಇದನ್ನು ಹೊರತು ಪಡಿಸಿದರೆ ಜನರು ರಸ್ತೆಗೆ ಇಳಿಯದೇ ಸರಕಾರ ಮತ್ತು ಜಿಲ್ಲಾಡಳಿತದ ಆದೇಶಗ ಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಶಿಸ್ತನ್ನು ಮೆರೆಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯಾದ್ಯಂತ ಎಲ್ಲಿ ನೋಡಿದರಲ್ಲಿ ನೀರವ ಮೌನ ಆವರಿಸಿದೆ.
ಕೇರಳದ 3 ಜಿಲ್ಲೆ ಹಾಗೂ ಕರ್ನಾಟಕದ 3 ಜಿಲ್ಲೆಗಳೊಂದಿಗೆ ಕೊಡಗು ಗಡಿಯನ್ನು ಹಂಚಿಕೊಂಡಿದ್ದು, ಈ ಗಡಿಭಾಗಗಳನ್ನು ಸಂಪೂರ್ಣವಾಗಿ ಮುಚ್ಚುವ ಮೂಲಕ ಜಿಲ್ಲಾಡಳಿತ ಜಿಲ್ಲೆಯ ಜನರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಗಡಿಗಳನ್ನು ಬಂದ್ ಮಾಡಿ ಜನರ ಪ್ರಾಣ ರಕ್ಷಣೆಗೆ ದೃಢ ನಿರ್ಧಾರ ಗಳನ್ನು ಕೈಗೊಂಡ ಏಕೈಕ ಜಿಲ್ಲೆಯಾಗಿ ಕೊಡಗು ಗುರುತಿಸಿಕೊಂಡಿದೆ. ಜಿಲ್ಲೆಯ ಆಡಳಿತ ವ್ಯವಸ್ಥೆ, ಜನ ಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮಾತ್ರವಲ್ಲದೇ ರಾಜ್ಯ ಸರಕಾರ ಕೂಡ ಕೊಡಗು ಜಿಲ್ಲಾಡಳಿತದ ನಿರ್ಧಾರಗಳನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ. ಜಿಲ್ಲೆಯ ಆಡಳಿತ ವ್ಯವಸ್ಥೆ ಕೈಗೊಂಡ ನಿರ್ಧಾರಗಳು ರಾಜ್ಯಕ್ಕೆ ಮಾದರಿಯಾಗಿದೆ. ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಹೋಂ ಕ್ವಾರೆಂಟೇನ್‍ನಲ್ಲಿರುವ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಿದ್ದು, ಎಲ್ಲಿಯೂ ಲೋಪ ವಾಗದಂತೆ ಎಚ್ಚರ ವಹಿಸಿವೆ.
ಮಂಜಿನ ನಗರಿ ಮಡಿಕೇರಿ, ವಾಣಿಜ್ಯ ನಗರಿ ಎಂದೇ ಕರೆಯಲ್ಪಡುವ ಕುಶಾಲನಗರ, ಗೋಣಿಕೊಪ್ಪಲು ಕೂಡ ಸ್ವಯಂ ಪ್ರೇರಣೆ ಯಿಂದ ಕಫ್ರ್ಯೂ ವಿಧಿಸಿಕೊಂಡಂತೆ ಕಂಡು ಬರುತ್ತಿವೆ. ಹಾಲು ಮಾರುವ ಅಂಗಡಿಗಳು, ದಿನ ಪತ್ರಿಕೆಗಳನ್ನು ವಿತರಿಸುವ ಮಳಿಗೆಗಳು ಬೆಳಗ್ಗೆ ಮಾತ್ರವೇ ಬಾಗಿಲು ತೆರೆದು ಬಳಿಕ ಮುಚ್ಚಿಕೊಳ್ಳುತ್ತಿವೆ. ವಾರಕ್ಕೆ ಕೇವಲ 3 ದಿನ ಮಾತ್ರವೇ ದಿನಸಿ ಪದಾರ್ಥ ಗಳನ್ನು ಕೊಳ್ಳುವ ಅವಕಾಶವನ್ನು ನೀಡ ಲಾಗಿದ್ದು, ಪ್ರಾರಂಭದಲ್ಲಿ ಸೇರುತ್ತಿದ್ದ ಜನ ದಟ್ಟಣೆ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿಲ್ಲ. ಇನ್ನು ಹೊರ ಜಿಲ್ಲೆಗಳಿಂದ ದಿನಸಿ, ತರಕಾರಿ, ಹಣ್ಣು ಮತ್ತಿತರ ದಿನೋ ಪಯೋಗಿ ವಸ್ತುಗಳನ್ನು ಜಿಲ್ಲೆಗೆ ತರಲು ಪೊಲೀಸ್ ಪಾಸ್ ಸಹಿತ ಸಂಪೂರ್ಣ ಅನುಮತಿ ನೀಡಿರುವುದರಿಂದ ಮಳಿಗೆಗಳಲ್ಲಿ ದಾಸ್ತಾನು ಕೊರತೆ ಎದುರಾಗಬಹುದು ಎಂಬ ಆತಂಕವೂ ದೂರವಾಗಿದೆ.
ಜಿಲ್ಲೆಯ ಜನರು ಕೂಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗೆ ಸಂಪೂರ್ಣ ಸಹಕಾರ ನೀಡು ತ್ತಿದ್ದು, ಮನೆಗಳಲ್ಲಿಯೇ ಉಳಿಯುವ ಮೂಲಕ ಗೃಹ ಕಫ್ರ್ಯೂಗಳನ್ನು ಸ್ವಯಂ ಪ್ರೇರಿತ ರಾಗಿ ಅಳವಡಿಸಿಕೊಂಡಿದ್ದಾರೆ. ಲಾಕ್‍ಡೌನ್ ಪ್ರಾರಂಭದ ದಿನಗಳಲ್ಲಿ ಕೆಲ ಯುವಕರು ಬೀದಿಗೆ ಇಳಿದಾಗ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ದಿನಸಿ ವಸ್ತುಗಳನ್ನು ಖರೀದಿಸುವ ಸಂದರ್ಭ ಪೊಲೀಸರು ಅನಿವಾರ್ಯವಾಗಿ ಲಾಠಿಯನ್ನು ಕೈಗೆತ್ತಿಕೊಂಡ ಬೆರಳೆಣಿಕೆ ಪ್ರಕರಣಗಳನ್ನು ಹೊರತುಪಡಿ ಸಿದರೆ ಮತ್ತೆಲ್ಲಿಯೂ ಪೊಲೀಸರಿಗೆ ಲಾಠಿ ಕೆಲಸಕ್ಕೆ ಬರಲಿಲ್ಲ ಎಂದರೂ ತಪ್ಪಾಗಲಾರದು.
ಪ್ರಸಾದ್ ಸಂಪಿಗೆಕಟ್ಟೆ