ಬೆಂಗಳೂರು, ಜೂ.21-ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಆರ್ಭಟ ಹೆಚ್ಚಾ ಗುತ್ತಿದ್ದು, ಸೋಂಕಿತರ ಸಂಖ್ಯೆ 9150ಕ್ಕೆ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರು ಕೊರೊನಾ ವೈರಸ್‍ನಿಂದ ತಲ್ಲಣಗೊಂಡಿದ್ದು, ಭಾನುವಾರ 196 ಪ್ರಕರಣ ದಾಖ ಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಸೋಂಕಿನ
ಸಂಖ್ಯೆ 1272ಕ್ಕೆ ಏರಿದೆ. ಇಂದು ಬೆಂಗಳೂರಿನಲ್ಲಿ ಹೊಸ ದಾಗಿ 20 ಪ್ರದೇಶಗಳು ಕಂಟೈನ್ಮೆಂಟ್ ಜೋನ್‍ಗಳಾಗಿವೆ. ಬೆಂಗಳೂರಿನ ವಾಣಿಜ್ಯ ಪ್ರದೇಶವಾಗಿರುವ ಚಿಕ್ಕಪೇಟೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿರುವ ಕಾರಣ ಅಲ್ಲಿನ ವರ್ತಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಇಂದು ಚಿಕ್ಕಪೇಟೆಯ ಎಲ್ಲಾ ವರ್ತಕರು ಸಭೆ ಸೇರಿ ಒಂದು ವಾರ ಕಾಲ ಚಿಕ್ಕಪೇಟೆಯನ್ನು ಸ್ವಯಂ ಲಾಕ್‍ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿರುವ ಈ ಪ್ರದೇಶಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದರಿಂದ ಸೋಂಕು ಹರಡಬಹುದು ಎಂಬ ಭೀತಿಯಿಂದಾಗಿ ವರ್ತಕರು ಸ್ವಯಂ ಲಾಕ್‍ಡೌನ್‍ಗೆ ನಿರ್ಧರಿಸಿದ್ದಾರೆ. ಮೃತರ ಸಂಖ್ಯೆಯಲ್ಲಿಯೂ ಕೂಡ ಏರಿಕೆ ಕಂಡಿದ್ದು, ಇಂದು ಬೆಂಗಳೂರಲ್ಲಿ ಮೂವರು ಮತ್ತು ಬೀದರ್‍ನಲ್ಲಿ ಇಬ್ಬರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 137ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲಿ ಮೂವರು ಪೊಲೀಸರು ಸೇರಿದಂತೆ 18 ಮಂದಿಗೆ ಇಂದು ಸೋಂಕು ಪತ್ತೆಯಾಗಿದೆ. ಮಂಡ್ಯ ಮತ್ತು ಹಾಸನದಲ್ಲಿ ತಲಾ ಐವರಿಗೆ ಸೋಂಕು ತಗುಲಿದ್ದು, ರಾಜ್ಯದಲ್ಲಿ ಇಂದು 453 ಪ್ರಕರಣಗಳು ದಾಖಲಾಗಿವೆ.
ಬಳ್ಳಾರಿಯಲ್ಲಿ 40, ಕಲಬುರಗಿ ಮತ್ತು ವಿಜಯಪುರ ತಲಾ 39, ಗದಗ 18, ಧಾರವಾಡ 15, ಬಾಗಲಕೋಟೆ 14, ಬೀದರ್ 13, ದಾವಣಗೆರೆ, ಉತ್ತರ ಕನ್ನಡ ಮತ್ತು ಕೋಲಾರದಲ್ಲಿ ತಲಾ 8, ದಕ್ಷಿಣ ಕನ್ನಡ 7, ತುಮಕೂರು 4, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಹಾವೇರಿಯಲ್ಲಿ ತಲಾ 3, ಶಿವಮೊಗ್ಗ, ರಾಯಚೂರು ಮತ್ತು ರಾಮನಗರದಲ್ಲಿ ತಲಾ 2, ಚಿಕ್ಕಮಗಳೂರಿನಲ್ಲಿ ಒಂದು ಪ್ರಕರಣ ಇಂದು ದಾಖಲಾಗಿದೆ.
ರಾಜ್ಯದ 9150 ಸೋಂಕಿತರ ಪೈಕಿ ಇಂದು 225 ಸೇರಿದಂತೆ ಈವರೆಗೆ 5618 ಮಂದಿ ಗುಣಮುಖರಾಗಿದ್ದು, 3391 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಇವರ ಪೈಕಿ 77 ಮಂದಿಯನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಪತ್ತೆಯಾದ ಸೋಂಕಿತರ ಪೈಕಿ 69 ಮಂದಿ ಹೊರ ರಾಜ್ಯದವರಾದರೆ, 5 ಮಂದಿ ವಿದೇಶದಿಂದ ಬಂದವರು. ಸೋಂಕಿತರ ಪ್ರಥಮ ಸಂಪರ್ಕದ 20,301 ಮತ್ತು ದ್ವಿತೀಯ ಸಂಪರ್ಕದ 14,467 ಮಂದಿ ಸೇರಿದಂತೆ 34,768 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಸಿಂಗಪುರದಿಂದ 117, ಸ್ಯಾನ್‍ಫ್ರಾನ್ಸಿಸ್ಕೋದಿಂದ 84, ಯುನೈಟೆಡ್ ಕಿಂಗ್‍ಡಮ್‍ನಿಂದ 154 ಮತ್ತು ದುಬೈನಿಂದ ಇಬ್ಬರು ಸೇರಿದಂತೆ 357 ಮಂದಿ ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.