ಕೋವಿಡ್‍ಗೆ ಅಪ್ಪ-ಅಮ್ಮ ಬಲಿ;  ಅನಾಥ ಮಕ್ಕಳಿಗೆ ಸಚಿವೆ ಸಾಂತ್ವನ
ಮೈಸೂರು

ಕೋವಿಡ್‍ಗೆ ಅಪ್ಪ-ಅಮ್ಮ ಬಲಿ; ಅನಾಥ ಮಕ್ಕಳಿಗೆ ಸಚಿವೆ ಸಾಂತ್ವನ

June 20, 2021

ಮೈಸೂರು, ಜೂ.19(ಎಂಕೆ)- ಮೈಸೂರು ನಗರದಲ್ಲಿ ಕೊರೊನಾ ಸೋಂಕಿನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಅ.ಜೊಲ್ಲೆ ಸಾಂತ್ವನ ಹೇಳಿದರು.
ಮೈಸೂರಿನ ಗಂಗೋತ್ರಿ ಬಡಾವಣೆ ನಿವಾಸಿ, ಮೈವಿವಿ ತೋಟಗಾರಿಕೆ ವಿಭಾಗದಲ್ಲಿ ಹಂಗಾಮಿ ವಾಹನ ಚಾಲಕರಾಗಿದ್ದ ಡಿ.ಪ್ರಸನ್ನ(44) ಹಾಗೂ ಪತ್ನಿ ಕೆ.ಸುಷ್ಮಾ(37) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅವರ ಮಗ(8ನೇ ತರಗತಿ ವಿದ್ಯಾರ್ಥಿ), ಮಗಳು (6ನೇ ತರಗತಿ ವಿದ್ಯಾ ರ್ಥಿನಿ) ಈಗ ಅನಾಥರಾಗಿದ್ದಾರೆ. ಇಬ್ಬರೂ ಮಕ್ಕ ಳನ್ನು ಶನಿವಾರ ಭೇಟಿ ಮಾಡಿದ ಸಚಿವೆ, ಮಕ್ಕಳಿಗೆ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಏನಾದರೂ ಸಮಸ್ಯೆಗಳಿದ್ದರೆ ತಿಳಿಸಿ, ಯಾವುದಕ್ಕೂ ಹಿಂಜರಿಕೆ ಬೇಡ ಎಂದು ಧೈರ್ಯ ತುಂಬಿದರು. ಮಕ್ಕಳ ಸದ್ಯ ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಅನುಕೂಲ ಮಾಡಿ ಕೊಡುವುದಾಗಿ ಭರವಸೆ ನೀಡಿದರು. ಜತೆಗೆ ಪ್ರತಿ ತಿಂಗಳೂ 3,500 ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕೊರೊನಾದಿಂದ ಮೃತರಾದವರ ಅವಲಂಬಿತ ರಿಗೆ ಸರ್ಕಾರ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು, ಆ ಮೊತ್ತವನ್ನು ಈ ಇಬ್ಬರೂ ಮಕ್ಕಳಿಗೆ ದೊರಕಿಸಿಕೊಡಲು ಸಹಾಯ ಮಾಡ ಲಾಗುವುದು ಎಂದು ತಿಳಿಸಿದರು.

ಮೃತ ಡಿ.ಪ್ರಸನ್ನ ಅವರ ಹಿರಿಯ ಸಹೋದರ ಜಯರಾಂ ಮಾತನಾಡಿ, ಸ್ಥಳೀಯ ಮುಖಂ ಡರು, ಶಾಸಕರು ಸಹಾಯ ಮಾಡುತ್ತಿದ್ದಾರೆ. ಕೆಲ ಶಿಕ್ಷಣ ಸಂಸ್ಥೆಗಳು ಮಕ್ಕಳಿಬ್ಬರಿಗೂ ಉಚಿತ ಶಿಕ್ಷಣ ನೀಡುವ ಕುರಿತು ಭರವಸೆ ನೀಡಿವೆ ಎಂದರು.

ಸಹಕಾರ ನೀಡಿ: ಡಿ.ಪ್ರಸನ್ನ ಅವರ ತಾಯಿ ಸುಂದರಮ್ಮ ಮಾತನಾಡಿ, ಮಗ-ಸೊಸೆ ಕಳೆದು ಕೊಂಡು ತುಂಬಾ ದುಃಖವಾಗಿದೆ. ಮೊಮ್ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನೆರವಾಗಿ ಎಂದು ಸಚಿವೆ ಬಳಿ ಮನವಿ ಮಾಡಿದರು. ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಪದ್ಮ, ಪ್ರಸನ್ನ ಅವರ ತಂದೆ ದಾಸಪ್ಪ ಮತ್ತು ಕುಟುಂಬದವರು ಉಪಸ್ಥಿತರಿದ್ದರು.

Translate »