ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ   ಎಲ್ಲರಿಗೂ ಕೋವಿಡ್ ಟೆಸ್ಟ್
ಮೈಸೂರು

ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ  ಎಲ್ಲರಿಗೂ ಕೋವಿಡ್ ಟೆಸ್ಟ್

September 28, 2020

ಮೈಸೂರು, ಸೆ.27(ಪಿಎಂ)- ದಸರಾ ಮಹೋತ್ಸವದ ಜಂಬೂ ಸವಾರಿ ಮೆರ ವಣಿಗೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ 5 ದಿನ ಮುನ್ನವೇ ಕೋವಿಡ್ ಪರೀಕ್ಷೆ ಮಾಡಿಸಲು ನಿರ್ಧರಿಸಲಾಗಿದೆ. ಕೊರೊನಾ ಸೋಂಕು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ದಸರಾ ಸಿದ್ಧತೆಗಳ ಸಂಬಂಧ ಸಭೆ ನಡೆಸಿದ ಸಚಿವರು ಬಳಿಕ ಮಾಧ್ಯಮ ದವರಿಗೆ ಪ್ರತಿಕ್ರಿಯಿಸಿದರು.

ಜಂಬೂ ಮೆರವಣಿಗೆಯಲ್ಲಿ ಪಾಲ್ಗೊ ಳ್ಳುವವರು ಕೋವಿಡ್ ಪರೀಕ್ಷೆಯಲ್ಲಿ ನೆಗೆ ಟಿವ್ ವರದಿ ಪ್ರಮಾಣಪತ್ರ ಪಡೆದು ಕೊಂಡಿರಬೇಕು. ಅದಕ್ಕಾಗಿ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

ದಸರಾ ಸಿದ್ಧತೆ ಸಂಬಂಧ ಈಗಷ್ಟೇ 4ನೇ ಸಭೆ ಮುಗಿಸಿದ್ದೇನೆ. ಅ.2ರಂದು 5 ಆನೆಗಳ ಗಜಪಡೆ ಸ್ವಾಗತ ಕಾರ್ಯಕ್ರಮ ನಡೆಯ ಲಿದೆ. ಅಂದು ಮಧ್ಯಾಹ್ನ 12.18ರಿಂದ 12.40ರ ಧನುರ್ ಲಗ್ನದಲ್ಲಿ ಅರಮನೆಯ ಜಯ ಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಸ್ವಾಗತ ಕೋರಲಾಗುವುದು ಎಂದರು. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಕಾರ್ಯ ಕ್ರಮಕ್ಕೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು. ಅರಮನೆ ಆವರಣದ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಹಾಗೂ ಜಂಬೂ ಸವಾರಿಗೆ ಹೇಗೆ ತಯಾರಿ ನಡೆಸಬೇಕು ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಬಾಕಿ ಇರುವ ಕೆಲಸಗಳ ಬಗ್ಗೆ ಸಂಸದರು, ಶಾಸಕರು ಗಮನ ಸೆಳೆದಿದ್ದಾರೆ. ಆ ಬಗ್ಗೆ ಮುಂದಿನ ಸಭೆಯೊಳಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಜಂಬೂಸವಾರಿ ದಿನದ ವ್ಯವಸ್ಥೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, `ಜಂಬೂ ಸವಾರಿ ಮೆರವಣಿಗೆಯಲ್ಲಿ 2 ಸಾವಿರ ಮಂದಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸು ವಂತೆಯೂ, ದಸರಾ ಸಾಂಸ್ಕøತಿಕ ಕಾರ್ಯಕ್ರಮಕ್ಕೆ 1 ಸಾವಿರ ಮಂದಿ, ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಗೆ 250 ಮಂದಿಗೆ ಅವಕಾಶ ನೀಡುವಂತೆಯೂ ನಾನು, ಸಚಿವ ಸಿ.ಟಿ.ರವಿ, ಶಾಸಕ ಎಸ್.ಎ.ರಾಮದಾಸ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ಮನವಿ ಮಾಡಿದ್ದೇವೆ. ಸಾಧಕ-ಬಾಧಕ ಪರಿಶೀಲಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ 2-3 ದಿನಗಳಲ್ಲಿ ಅನುಮತಿ ನೀಡಲಿದ್ದಾರೆ. ಬಳಿಕ ಅ.2ರಂದು ಮತ್ತೊಂದು ಸಭೆ ನಡೆಸಲಿದ್ದೇವೆ ಎಂದರು. ಕೊರೊನಾ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಜನದಟ್ಟಣೆ ಸೇರದÀಂತೆ ನೋಡಿಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು. ಕೋವಿಡ್ ಜಾಗೃತಿ, ಕೇಂದ್ರ-ರಾಜ್ಯ ಸರ್ಕಾರಗಳ ಪ್ರಮುಖ ಅಭಿವೃದ್ಧಿ, ಕಲ್ಯಾಣ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಬಿ.ಶರತ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಪಂ ಸಿಇಒ ಡಿ.ಭಾರತಿ, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಮತ್ತಿತರರು ಸಭೆಯಲ್ಲಿದ್ದರು.

 

 

 

 

 

 

 

 

Translate »