ಲಸಿಕಾ ಅಭಿಯಾನ ಗೊಂದಲಕ್ಕೆ `ಕೋವಿನ್-ಕಾರ್’ ಹೊಸ ಆ್ಯಪ್ ಪರಿಹಾರ
ಮೈಸೂರು

ಲಸಿಕಾ ಅಭಿಯಾನ ಗೊಂದಲಕ್ಕೆ `ಕೋವಿನ್-ಕಾರ್’ ಹೊಸ ಆ್ಯಪ್ ಪರಿಹಾರ

July 15, 2021

ಮೈಸೂರು, ಜು.14(ಎಂಟಿವೈ)- ಲಸಿಕೆ ಪಡೆಯಲು ನೋಂದಣಿ ಪ್ರಕ್ರಿಯೆಯಲ್ಲಾಗುತ್ತಿರುವ ಗೊಂದಲ ಹಾಗೂ ಸಂಭವನೀಯ ಕೊರೊನಾ 3ನೇ ಅಲೆಗೂ ಮುನ್ನವೇ ಹೆಚ್ಚಿನ ಜನರಿಗೆ ಲಸಿಕೆ ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಲಸಿಕೆ ಪಡೆಯುವವರ ನೋಂದಣಿಗಾಗಿ ಹೊಸದಾಗಿ `ಕೋವಿನ್-ಕಾರ್’ ಆ್ಯಪ್‍ವೊಂದನ್ನು ಅಭಿವೃದ್ಧಿ ಪಡಿಸಿದ್ದು, ಪ್ರಾಯೋಗಿಕವಾಗಿ ಮೈಸೂರು ನಗರಕ್ಕೆ ಸೀಮಿತಗೊಂಡಂತೆ ಪೈಲಟ್ ಪ್ರಾಜೆಕ್ಟ್ ಅಡಿಯಲ್ಲಿ ಹೊಸ ಆ್ಯಪ್ ಮೂಲಕ ನೋಂದಣಿ ಅಭಿಯಾನ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪ್ರಸ್ತುತ ದೇಶದಾದ್ಯಂತ ಕೋವಿನ್ ಅಪ್ಲಿಕೇಷನ್ ಮೂಲಕ ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ಕಾರಣದಿಂದ ಹೆಸರು ನೋಂದಾಯಿಸುವ ವೇಳೆ ಗೊಂದಲ ಉಂಟಾಗುತ್ತಿತ್ತು. ಅಲ್ಲದೆ ಹಲವು ಬಾರಿ ಪ್ರಯತ್ನಿ ಸಬೇಕಾದ ಅನಿವಾರ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಮಹಾರಾಷ್ಟ್ರ ಲಸಿಕೆ ಅಭಿಯಾನ ಕ್ಕಾಗಿ ಹೊಸ ಆ್ಯಪ್ ಅಭಿವೃದ್ಧಿಪಡಿಸಿ ಯಶಸ್ವಿ ಲಸಿಕಾ ಅಭಿಯಾನ ನಡೆಸುತ್ತಿವೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹೊಸ ಆ್ಯಪ್ ಅಭಿವೃದ್ಧಿಪಡಿಸಿ `ಕೋವಿನ್-ಕಾರ್’ ಎಂದು ಹೆಸರಿಡಲಾಗಿದೆ. ಪ್ರಯೋಗಾತ್ಮಕ ವಾಗಿ ಮೈಸೂರು ನಗರವನ್ನು ಕೇಂದ್ರೀಕರಿಸಿಕೊಂಡು ಕೋವಿನ್-ಕಾರ್ ಆ್ಯಪ್ ಮೂಲಕ ಲಸಿಕಾ ಅಭಿಯಾನ ನಡೆಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಲಸಿಕೆ ಕೊರತೆ ಉಂಟಾಗಿದ್ದು, ಲಭ್ಯವಿರುವ ಲಸಿಕೆಯಲ್ಲೇ ಈ ಆ್ಯಪ್‍ನಡಿ ಲಸಿಕೆ ಪಡೆಯಲು ಸಾರ್ವಜನಿಕರು ಸುಲಭವಾಗಿ ಸ್ಲಾಟ್ ಕಾಯ್ದಿರಿಸಬಹುದಾಗಿದೆ. ಲಸಿಕಾ ಅಭಿಯಾನ ಸುಗಮಗೊಳಿಸುವುದು, ಹೆಚ್ಚು ಜನರಿಗೆ ಲಸಿಕೆ ನೀಡಬಹುದು ಹಾಗೂ ನೋಂದಣಿ ಸರಳೀಕರಿಸಲು ಈ ಆ್ಯಪ್ ಸಹಕಾರಿಯಾಗಲಿದ್ದು, ಮೈಸೂರು ನಗರದಲ್ಲಿ ಪ್ರಾಯೋಗಿಕ ಯೋಜನೆಯನ್ನು ಜಾರಿಗೆ ತಂದು, ಅದರ ಯಶಸ್ಸಿನ ಆಧಾರದ ಮೇಲೆ ರಾಜ್ಯದಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ.

ತರಬೇತಿ ಕಾರ್ಯಾಗಾರ: ರಾಜ್ಯದ ಆರೋಗ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಕೋವಿನ್-ಕಾರ್ ಆ್ಯಪ್ ಬಳಕೆ ಸಂಬಂಧ ವೈದ್ಯರು ಮತ್ತು ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಸ ಲಾಗಿದೆ. ಬೆಂಗಳೂರಿನ ರಾಜ್ಯ ವಾರ್ ರೂಮ್ ನಿಂದ ಪ್ರಸನ್ನ ಕುಮಾರ್ ನೇತೃತ್ವದ ತಾಂತ್ರಿಕ ತಂಡ ನಿನ್ನೆ ಮೈಸೂರಿಗೆ ಬಂದು, ಮೈಸೂರು ನಗರ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡಿರುವ ಸಿಬ್ಬಂದಿ, ಡೇಟಾ ಆಪರೇಟರ್ ಸೇರಿದಂತೆ ಸಿಬ್ಬಂದಿಗೆ ತರಬೇತಿ ನೀಡಿದ್ದಾರೆ. ಎಡಿಸಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಡಿಹೆಚ್‍ಓ ಡಾ.ಕೆ.ಹೆಚ್.ಪ್ರಸಾದ್, ಆರ್‍ಸಿಹೆಚ್‍ಓ ಡಾ.ಎಲ್.ರವಿ(ಲಸಿಕಾ ಅಭಿಯಾ ನದ ಉಸ್ತುವಾರಿ), ಜಿಲ್ಲಾ ಮೇಲ್ವಿಚಾರಣಾಧಿಕಾರಿ ಡಾ.ಎಲ್.ಶಿವಪ್ರಸಾದ್, ಡಾ.ಸುಧೀರ್‍ನಾಯಕ್, ತಾಲೂಕು ಆರೋಗ್ಯಾಧಿಕಾರಿಗಳು, ಪಾಲಿಕೆ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ 60ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಯಿತು.

ಆ್ಯಪ್ ಕಾರ್ಯವೈಖರಿ: ಈ ಹಿಂದೆ ಲಸಿಕೆ ಪಡೆಯಲು ಬಯಸುವವರು ಕೋವಿನ್ ಪೆÇೀರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳ ಬೇಕಾಗಿತ್ತು. ಎರಡು-ಮೂರು ನಿಮಿಷಗಳಲ್ಲಿ ತಮ್ಮ ಹೆಸರು, ವಯಸ್ಸು, ಆಧಾರ್ ಸಂಖ್ಯೆ ನೋಂದಾ ಯಿಸಬೇಕಾಗಿತ್ತು. ನಂತರ, ಜಿಲ್ಲಾ ಲಸಿಕಾ ಕಾರ್ಯ ಕ್ರಮಗಳ ಉಸ್ತುವಾರಿ ಮತ್ತು ನೋಡಲ್ ಅಧಿಕಾರಿಗಳು ಡೇಟಾ ಸಂಗ್ರಹಿಸುತ್ತಿದ್ದರು. ಲಸಿಕೆ ಲಭ್ಯತೆ ಹಾಗೂ ದಾಸ್ತಾನಿನ ಆಧಾರದ ಮೇಲೆ ಲಸಿಕೆ ನೀಡುವ ದಿನಾಂಕ ನೀಡಲಾಗುತ್ತಿತ್ತು. ಆದರೆ ಹೊಸ ಆ್ಯಪ್‍ನಲ್ಲಿ ಲಸಿಕೆ ಲಭ್ಯತೆ ಹಾಗೂ ಸ್ಲಾಟ್ ಬುಕ್ ಬಗ್ಗೆ 24 ರಿಂದ 36 ಗಂಟೆ ಮೊದಲೇ ಸಂದೇಶ ರವಾನೆಯಾಗುತ್ತದೆ. ಆ ಸಂದೇಶವನ್ನು ಡೌನ್‍ಲೋಡ್ ಮಾಡಿಕೊಂಡು ಅಥವಾ ಪ್ರಿಂಟ್ ತೆಗೆದುಕೊಂಡು ಸಂಬಂಧಪಟ್ಟ ಲಸಿಕಾ ಕೇಂದ್ರಕ್ಕೆ ಹೋಗಿ ತೋರಿಸಿ, ಲಸಿಕೆ ಪಡೆಯಬಹುದಾಗಿದೆ.

ಅಲ್ಲದೆ ಲಸಿಕೆ ಲಭ್ಯತೆ, ದಿನಾಂಕ, ಸ್ಥಳ ಮತ್ತು ಸಮಯ, ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಇರುವಿಕೆ ಬಗ್ಗೆಯೂ ಹೊಸ ಆ್ಯಪ್ ಮಾಹಿತಿ ಒದಗಿಸುತ್ತದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, 45 ವರ್ಷಕ್ಕಿಂತ ಮೇಲ್ಪಟ್ಟವರು, ಮುಂಚೂಣಿ ಕಾರ್ಯ ಕರ್ತರು, ಆದ್ಯತೆ ವಲಯದ 18-44 ವರ್ಷ ದೊಳಗಿನವರಿಗೆ ಪ್ರತ್ಯೇಕವಾಗಿ ಮಾಹಿತಿ ಲಭ್ಯವಾಗ ಲಿದೆ. ಅಲ್ಲದೆ, ಮೊದಲ ಹಾಗೂ ಎರಡನೇ ಡೋಸ್ ಪಡೆದವರು, ಹೀಗೆ ಯಾರಿಗೆ ಆದ್ಯತೆ ನೀಡಬೇಕು ಎಂಬುದರ ಬಗ್ಗೆಯೂ ಮಾಹಿತಿ ಒದಗಿಸಲಿದ್ದು, ಲಸಿಕಾ ಅಭಿಯಾನದ ಯಶಸ್ಸಿಗೆ ಈ ಹೊಸ ಆ್ಯಪ್ ಭರವಸೆ ಮೂಡಿಸಿದೆ.
ಈಗಾಗಲೇ ಮೊದಲ ಹಂತದ ತರಬೇತಿ ನೀಡಲಾಗಿದ್ದು, ಒಂದು ವಾರ ಆ್ಯಪ್ ಬಳಕೆ ಸಂಬಂಧ ಪ್ರಾಯೋಗಿಕ ಚಟುವಟಿಕೆ ನಡೆಯಲಿದೆ. ಎಲ್ಲರಲ್ಲೂ ಪರಿಣತಿ ಕಂಡು ಬಂದರೆ ಮುಂದಿನ ವಾರದಿಂದ ಕೋವಿನ್-ಕಾರ್ ಆ್ಯಪ್ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸಾಂಸ್ಕøತಿಕ ನಗರಿ ಮೈಸೂರಲ್ಲಿ ಕಾರ್ಯಾರಂಭ ಮಾಡಲಿದೆ.

Translate »