ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ವಿವಿಧ ನಾಯಕರು
ಮೈಸೂರು

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ವಿವಿಧ ನಾಯಕರು

July 15, 2021

ಮೈಸೂರು,ಜು.14(ಎಂಟಿವೈ)- ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದ ನಂತರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿರುವ ರಾಜಕೀಯ ಧುರೀಣರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬುಧವಾರವೂ ಹಲವು ನಾಯಕರು ಮಠಕ್ಕೆ ಭೇಟಿ ನೀಡಿ, ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಮೈಸೂರಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಹಲವು ನಾಯಕರು ಸುತ್ತೂರು ಮಠಕ್ಕೆ ತೆರಳಿ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳಲ್ಲಿ ಆಶೀರ್ವಾದ ಪಡೆದರು.

ಕೆಆರ್‍ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುವ ಮೂಲಕ ಸಂಚಲನವನ್ನುಂಟು ಮಾಡುತ್ತಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಪ್ರತಾಪ ಸಿಂಹ, ಶಾಸಕರಾದ ತನ್ವೀರ್ ಸೇಠ್, ಎಲ್.ನಾಗೇಂದ್ರ ಹಾಗೂ ಇನ್ನಿತರರು ಭೇಟಿ ನೀಡಿದ್ದರು. ಇದೇ ವೇಳೆ ಡಿಜಿಪಿ ಪ್ರವೀಣ್ ಸೂದ್ ಕೂಡ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.

ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡ ಕೈ ಶಾಸಕ: ಮೈಸೂರಿನ ಎನ್.ಆರ್. ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಇಂದು ಬಿಜೆಪಿ ನಾಯಕರ ಒಡನಾಟ ದಲ್ಲಿದ್ದು ಗಮನ ಸೆಳೆದರು. ಕಳೆದ ವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಹಾಯ ಹಸ್ತ ಕಾರ್ಯಕ್ರಮ ಹಾಗೂ ಇಂಧನ ಬೆಲೆ ಏರಿಕೆ ವಿರೋಧಿಸಿ ನಡೆಸಿದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಬೆಂಬಲಿಗರೊಂದಿಗೆ ಗೈರು ಹಾಜರಾಗಿದ್ದ ತನ್ವೀರ್ ಸೇಠ್, ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸುತ್ತೂರು ಮಠಕ್ಕೆ ಭೇಟಿ ನೀಡಿದಾಗ ಆಕಸ್ಮಿಕವಾಗಿ ಜೊತೆಯಾದರು. ಬೆಳಗ್ಗೆ ಅವರ ನರಸಿಂಹರಾಜ ಕ್ಷೇತ್ರದಲ್ಲೇ ನಡೆದ ಕಾರ್ಯಕ್ರಮದಲ್ಲೂ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಗುರುತಿಸಿಕೊಂಡು ಗಮನ ಸೆಳೆದರು. ಕಳೆದ ನಾಲ್ಕು ದಿನದ ಹಿಂದಷ್ಟೇ ಲಸಿಕಾ ಅಭಿಯಾನದ ಬ್ಯಾನರ್‍ನಲ್ಲಿ ಬಿಜೆಪಿ ಚಿಹ್ನೆಯೊಂದಿಗೆ ಕೈ ಶಾಸಕ ತನ್ವೀರ್ ಸೇಠ್ ಅವರ ಭಾವಚಿತ್ರ ಪ್ರಕಟವಾಗಿ ಚರ್ಚೆಗೆ ಗ್ರಾಸವಾಗಿತ್ತು.

Translate »