ಇನ್ನಿತರೆಡೆಗೆ ಪೊಲೀಸ್ ಪಬ್ಲಿಕ್ ಶಾಲೆ ವಿಸ್ತರಣೆಗೆ  ಚಿಂತನೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ
ಮೈಸೂರು

ಇನ್ನಿತರೆಡೆಗೆ ಪೊಲೀಸ್ ಪಬ್ಲಿಕ್ ಶಾಲೆ ವಿಸ್ತರಣೆಗೆ ಚಿಂತನೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ

July 15, 2021

ಮೈಸೂರು,ಜು.14(ಪಿಎಂ)-ಮೈಸೂರು ಸೇರಿದಂತೆ ರಾಜ್ಯದ 6 ಕಡೆಗಳಲ್ಲಿ ಪೊಲೀಸ್ ಪಬ್ಲಿಕ್ ಶಾಲೆಗಳು ಪ್ರಸ್ತುತ ನಡೆಯುತ್ತಿದ್ದು, ಇನ್ನು ಕೆಲವೆಡೆಗೆ ವಿಸ್ತರಿಸುವ ಚಿಂತನೆ ಇದೆ ಎಂದು ತಿಳಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯನ್ನು ಮಾದರಿಯಾ ಗಿಸುವ ನಿಟ್ಟಿನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹಂತ ಹಂತವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಸಭಾಂಗಣದಲ್ಲಿ ಶಾಲೆಯ ಮಕ್ಕಳ ಪೋಷಕರೊಂದಿಗೆ ಬುಧವಾರ ಸಂವಾದ ನಡೆಸಿ ಬಳಿಕ ಅವರು ಮಾತನಾಡಿದರು. ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಕ್ಕಳ ಪೋಷಕರು ನೀಡಿದ ಸಲಹೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಲಾ ಗುವುದು. ಈ ಸಲಹೆಗಳನ್ನು ಕಾರ್ಯಗತಗೊಳಿಸಿದರೆ, ಈ ಶಾಲೆ ಪರಿಪೂರ್ಣವಾಗಿ ಮಾದರಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಪೋಷಕರ ಸಲಹೆಗಳಂತೆ ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಬಾಲಕಿಯರ ವಸತಿ ನಿಲಯ, ಕ್ರೀಡಾಂಗಣ ನಿರ್ಮಾಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ಆರಂಭಿಸುವುದು ಸೇರಿದಂತೆ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದರು.

ಪೋಷಕರು ಶಾಲೆಯ ಒಂದು ಭಾಗ. ಮಕ್ಕಳ ಬೆಳವಣಿಗೆ ಯಲ್ಲಿ ಪೋಷಕರ ಪಾತ್ರ ಮಹತ್ವದ್ದು. ಅದರಲ್ಲೂ ತಾಯಿಯ ಪಾತ್ರ ಬಹುಮುಖ್ಯ. ಪೊಲೀಸ್ ಇಲಾಖೆಯು ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಪೊಲೀಸ್ ಪಬ್ಲಿಕ್ ಶಾಲೆಗಳನ್ನು ನಡೆಸುತ್ತಿದೆ. ಪೊಲೀಸ್ ಇಲಾಖೆ ನೌಕರರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದೊಂದಿಗೆ ನಮ್ಮ ಈ ಶಾಲೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಹಲವು ಶಿಕ್ಷಣ ಸಂಸ್ಥೆಗಳು ತಮ್ಮ ಗುಣಮಟ್ಟದ ಶಿಕ್ಷಣದ ಮೂಲಕ ಮಾದರಿಯಾಗಿ ಪ್ರಖ್ಯಾತಿ ಹೊಂದಿವೆ. ಅದೇ ಮಾದರಿಯಲ್ಲಿ ನಮ್ಮ ಪೊಲೀಸ್ ಪಬ್ಲಿಕ್ ಶಾಲೆಗಳು ಹೊರಹೊಮ್ಮಬೇಕೆಂದು ಆಶಯ ವ್ಯಕ್ತಪಡಿಸಿದರು. ಸಂಸದ ಪ್ರತಾಪ್‍ಸಿಂಹ, ಶಾಸಕರಾದ ತನ್ವೀರ್ ಸೇಠ್, ಕೆ.ಮಹದೇವು, ಡಿಜಿಪಿ ಮತ್ತು ಐಜಿಪಿ ಪ್ರವೀಣ್ ಸೂದ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಎನ್.ಮೂರ್ತಿ, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಹಾಜರಿದ್ದರು.

Translate »