ಮಾನವ ಕಾವಲು ರೈಲ್ವೆ ಗೇಟ್ ನಿರ್ಮಾಣಕ್ಕೆ ಸೂಚಿಸುವೆ : ಶಾಸಕ ಹರ್ಷವರ್ಧನ್
ಮೈಸೂರು

ಮಾನವ ಕಾವಲು ರೈಲ್ವೆ ಗೇಟ್ ನಿರ್ಮಾಣಕ್ಕೆ ಸೂಚಿಸುವೆ : ಶಾಸಕ ಹರ್ಷವರ್ಧನ್

July 15, 2021

ನಂಜನಗೂಡು, ಜು. 14(ರವಿ)- ತಾಲೂಕಿನ ಕೋಡಿನರಸೀಪುರ ಗ್ರಾಮದ ಮುಖ್ಯರಸ್ತೆ ಮಧ್ಯೆ ಹಾದುಹೋಗಿರುವ ಮೈಸೂರು-ಚಾಮರಾಜನಗರ ರೈಲ್ವೆ ಮಾರ್ಗದಲ್ಲಿ ಗ್ರಾಮಸ್ಥರ ಕೋರಿಕೆ ಮೇರೆಗೆ ಮಾನವ ಕಾವಲು ಗೇಟ್ ನಿರ್ಮಾಣ ಮಾಡಲು ರೈಲ್ವೆ ಇಲಾಖೆಗೆ ಸೂಚನೆ ನೀಡುವುದಾಗಿ ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ಗ್ರಾಮದ ಮುಖ್ಯರಸ್ತೆಯನ್ನು ಮಂಗಳ ವಾರ ಪರಿಶೀಲಿಸಿದ ಬಳಿಕ ಮಾತನಾ ಡಿದ ಅವರು, ರೈಲ್ವೆ ಅಧಿಕಾರಿಗಳು ಕೆಳ ಸೇತುವೆ ನಿರ್ಮಾಣ ಮಾಡುವುದಾಗಿ ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ನನ್ನನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ವಾಸ್ತವ ಸ್ಥಿತಿಗತಿಯನ್ನು ಅವಲೋಕನ ಮಾಡಿದ ಬಳಿಕ ಏನು ಮಾಡಬೇಕೆಂಬುದನ್ನು ತಿಳಿಸ ಲಾಗುವುದು. ಅಲ್ಲಿವರೆಗೂ ಯಾವುದೇ ಕೆಲಸ ಆರಂಭಿಸಿದಂತೆ ಸೂಚಿಸಿದ್ದೇನೆ. ಸಂಸದ ವಿ.ಶ್ರೀನಿವಾಸಪ್ರಸಾದ್ ಸೂಚನೆ ಮೇರೆಗೆ ಸ್ಥಳ ಪರಿಶೀಲನೆಗೆ ಆಗಮಿಸಿರು ವುದಾಗಿ ಹೇಳಿದರು.

ಈ ವೇಳೆ ಗ್ರಾಮಸ್ಥರು, ಕಳೆದ 40 ವರ್ಷಗಳಿಂದ ಗ್ರಾಮದ ಸಂಪರ್ಕ ರಸ್ತೆಗೆ ರೈಲ್ವೆ ಗೇಟ್ ನಿರ್ಮಾಣ ಮಾಡದೇ ಹಾಗೆಯೇ ಬಿಟ್ಟಿದ್ದಾರೆ. ಈ ರಸ್ತೆಯನ್ನು ಮುಚ್ಚಿ ಗ್ರಾಮಸ್ಥರಿಗೆ ಅನಾನುಕೂಲವಾಗಿ ರುವ ಕಬಿನಿ ಬಲದಂಡೆ ನಾಲೆಯ ಏರಿ ಮೇಲೆ ಓಡಾಡುವಂತೆ ರೈಲ್ವೆ ಅಧಿಕಾರಿಗಳು ಮುಂದಾಗಿದ್ದರು. ಇದಕ್ಕೆ ತಡೆಯೊಡ್ಡಿ ಸತತ ಹೋರಾಟದ ಫಲವಾಗಿ ಹಾಲಿ ರಸ್ತೆಯನ್ನೇ ಉಳಿಸಿ ಕಾವಲು ಸಹಿತ ಗೇಟ್ ನಿರ್ಮಾಣ ಮಾಡುವಂತೆ ತಹಸೀಲ್ದಾರ್, ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೂ ಗೇಟ್ ನಿರ್ಮಿಸಲು ಮೀನಾಮೇಷ ಎನಿಸುತ್ತಿದೆ ಎಂದು ಆರೋಪಿಸಿದರು.

ಪ್ರಸ್ತುತ ಕೆಳಸೇತುವೆ ನಿರ್ಮಾಣ ಮಾಡುವುದಾಗಿ ರೈಲ್ವೆ ಇಲಾಖೆಯು ಹೇಳುತ್ತಿದ್ದು, ರಸ್ತೆಗೆ ಹೊಂದಿಕೊಂಡಂತೆ ದೊಡ್ಡಕವಲಂದೆ ಹೋಬಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೆಲ ಟ್ಯಾಂಕ್, ನುಗು ಹೈಲೆವೆಲ್ ನಾಲೆ, ಕೆರೆ ಕಟ್ಟೆಗಳಿರುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಿದೆ. ಜತೆಗೆ ರಸ್ತೆಯು ಹಳ್ಳದಲ್ಲಿ ರುವುದರಿಂದ ಬಹುಗ್ರಾಮ ನೀರಿನ ಘಟಕ ಹಾಗೂ ನಾಲೆಯ ನೀರು ಕೆಳಸೇತುವೆ ಕಡೆ ಹರಿದು ಬರುವ ಸಾಧ್ಯತೆಯೇ ಹೆಚ್ಚಿದೆ. ಹಾಗಾಗಿ ಇಲ್ಲಿ ಕೆಳಸೇತುವೆ ನಿರ್ಮಾಣ ಮಾಡುವುದಕ್ಕಿಂತ ಮಾನವ ಕಾವಲು ಸಹಿತ ಗೇಟ್ ನಿರ್ಮಾಣ ಮಾಡುವುದು ಸೂಕ್ತ ಎಂಬುದಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅದರಂತೆ ಗೇಟ್ ನಿರ್ಮಾಣ ಮಾಡಲು ಸೂಚನೆ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹರ್ಷ ವರ್ಧನ್, ಗ್ರಾಮಸ್ಥರಿಗೆ ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ನಾನೇ ಖುದ್ದು ಭೇಟಿ ನೀಡಿದ್ದೇನೆ. ನೀವು ಹೇಳುವಂತೆ ಇಲ್ಲಿ ಕೆಳಸೇತುವೆ ನಿರ್ಮಾಣ ಮಾಡುವುದು ಅವೈಜ್ಞಾನಿಕ ನಿರ್ಧಾರ. ಮಾನವ ಕಾವಲು ಸಹಿತ ಗೇಟ್ ನಿರ್ಮಾಣ ಮಾಡು ವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು. ಗ್ರಾಮಸ್ಥರಾದ ರಾಮು, ಸ್ವಾಮಿ, ಬಸವರಾಜು, ನಾಗಮ್ಮ, ಪುಟ್ಟರಂಗಮ್ಮ ಸೇರಿದಂತೆ ಇತರರಿದ್ದರು.

Translate »