ಗೋಣಿಕೊಪ್ಪದಲ್ಲಿ ಹುಲಿ ದಾಳಿಗೆ ಹಸು ಬಲಿ: ಅರಣ್ಯಾಧಿಕಾರಿ ವಿರುದ್ಧ ರೈತರ ಪ್ರತಿಭಟನೆ
ಕೊಡಗು

ಗೋಣಿಕೊಪ್ಪದಲ್ಲಿ ಹುಲಿ ದಾಳಿಗೆ ಹಸು ಬಲಿ: ಅರಣ್ಯಾಧಿಕಾರಿ ವಿರುದ್ಧ ರೈತರ ಪ್ರತಿಭಟನೆ

April 27, 2020

ಗೋಣಿಕೊಪ್ಪಲು, ಏ.26- ಹುದಿಕೇರಿ ಹೋಬಳಿ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಕೇರಿ ಗ್ರಾಮದ ರೈತ ಮುದ್ದಿಯಡ ಜಾಲಿ ಎಂಬುವರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಎತ್ತನ್ನು ಭಾನುವಾರ ಮುಂಜಾನೆ ಹುಲಿ ದಾಳಿ ನಡೆಸಿ ತಿಂದು ಹಾಕಿದೆ. ಮುಂಜಾನೆ ಮನೆ ಮಾಲೀಕರು ಕೊಟ್ಟಿಗೆಗೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭ ಎತ್ತು ಕಾಣೆಯಾಗಿತ್ತು. ನಂತರ ಗದ್ದೆಯ ಬಳಿ ತೆರಳಿದ ಸಂದರ್ಭ ಎತ್ತು ಸತ್ತು ಬಿದ್ದಿರುವುದು ಕಂಡು ಬಂದಿದೆ.

ಸುದ್ದಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು, ಹುಲಿ ಸೆರೆಗೆ ಇಂದೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಮಾಹಿತಿ ಅರಿತ ವಿರಾಜಪೇಟೆ ಡಿಎಫ್‍ಒ ಶಿವಶಂಕರ್ ಘಟನಾ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಅಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅಂತಿಮವಾಗಿ ಹುಲಿ ಸೆರೆಗೆ ಒಪ್ಪಿಗೆ ಸೂಚಿಸಿದ ಅಧಿಕಾರಿಗಳು ಸ್ಥಳಕ್ಕೆ ಮತ್ತಿಗೋಡು ಆನೆ ಶಿಬಿರದಿಂದ ಮೂರು ಸಾಕಾನೆಗಳನ್ನು ಕರೆಸಿ ತಕ್ಷಣವೇ ಸಿಬ್ಬಂದಿಗಳ ಸಹಕಾರದಿಂದ ಹುಲಿ ಸೆರೆಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಬಿದ್ದಪ್ಪ, ರೈತ ಮುಖಂಡರಾದ ಯೋಗೇಶ್, ಮಂಡಂಗಡ ವೀಟು, ಬಿ.ಪಿ. ಕಾವೇರಪ್ಪ, ಅರಣ್ಯ ಇಲಾಖೆಯ ತಿತಿಮತಿ ಎಸಿಎಫ್ ಶ್ರೀಪತಿ, ಪೊನ್ನಂಪೇಟೆ ಆರ್‍ಎಫ್‍ಒ ತೀರ್ಥ ಹಾಗೂ ಗ್ರಾಮಸ್ಥರು ಹಾಜರಿದ್ದರು.

Translate »