ಸಿದ್ದರಾಮಯ್ಯಗೆ ಮತ್ತೆ ಕಾಗೆ ಕಾಟ
News

ಸಿದ್ದರಾಮಯ್ಯಗೆ ಮತ್ತೆ ಕಾಗೆ ಕಾಟ

November 19, 2021

ಬೆಂಗಳೂರು, ನ.18- ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವ ರಿಗೆ ಮತ್ತೆ ಕಾಗೆ ಕಾಟ ಆರಂಭವಾಗಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅವರು ಪ್ರಯಾಣಿಸುವ ಕಾರಿನ ಮೇಲೆ ಕಾಗೆ ಕೂತಿತ್ತು. ಆದರೆ ಈಗ ವಿಧಾನಸೌಧದ ಮೂರನೇ ಮಹಡಿ ಯಲ್ಲಿರುವ ವಿಪಕ್ಷ ನಾಯಕರ ಕಚೇರಿಯ ಸಿದ್ದರಾಮಯ್ಯ ನಾಮಫಲಕದ ಮೇಲೆ ಕಾಗೆಯೊಂದು ಕೂತಿದೆ. ಇದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 2018, ಜೂನ್ 2 ರಂದು ಮುಖ್ಯಮಂತ್ರಿಗಳ ಕಚೇರಿ ಕೃಷ್ಣಾದಲ್ಲಿ, ಇದೇ ರೀತಿ ಅವರು ಪ್ರಯಾಣಿಸುವ ಕಾರಿನ ಮೇಲೆ ಕಾಗೆ ಕೂತಿತ್ತು. ಅದೇ ವರ್ಷ ಆಗಸ್ಟ್ ನಲ್ಲಿ ವಿಧಾನಸೌಧದ 3ನೇ ಮಹಡಿಯ ಸಿಎಂ ಕಚೇರಿ ಮುಂದೆ ಗೂಬೆಯೊಂದು ಸ್ವಲ್ಪ ಸಮಯ ಕೂತಿತ್ತು. ಆಗ ಜ್ಯೋತಿಷಿಗಳು ಎಚ್ಚರಿಕೆಯ ಸಂದೇಶ ನೀಡಿದ್ದರು.

ಇದಾದ ಮೇಲೆ ಮತ್ತೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ ಕೂತಾಗ ಅವರು ಕಾರನ್ನೆ ಬದಲಾಯಿಸಿದ್ದರು. ಈಗ ವಿಧಾನಸೌಧದ 3ನೇ ಮಹಡಿಯ ವಿಧಾನಸಭೆಯ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ಕಚೇರಿಯ ನಾಮಫಲಕದ ಮೇಲೆ ಕಾಗೆ ಕೂತಿದೆ. ಸಿದ್ದರಾಮಯ್ಯ ಅವರ ಕಾರು ಹಾಗೂ ನಾಮಫಲಕದ ಮೇಲೆ ಹಾಗಾಗ ಕಾಗೆ ಕೂರುತ್ತಿರುವುದು ಶಕುನವೋ ಅಥವಾ ಅಪಶಕುನವೋ ತಿಳಿಯದು. ಆದರೆ ಈ ಬಗ್ಗೆ ವಿಧಾನಸೌಧದ ಪಡಸಾಲೆ ಮಾತ್ರವಲ್ಲದೆ, ರಾಜಕೀಯ ವಲಯದಲ್ಲಿ ಕೂಡ ಚರ್ಚೆ ಆರಂಭವಾಗಿದೆ.

Translate »