ಗಗನಕ್ಕೇರುತ್ತಿದೆ ತರಕಾರಿ ಬೆಲೆ
ಮೈಸೂರು

ಗಗನಕ್ಕೇರುತ್ತಿದೆ ತರಕಾರಿ ಬೆಲೆ

November 19, 2021

ಮೈಸೂರು,ನ.18(ಎಸ್‍ಬಿಡಿ)- ಮಳೆ ಯಿಂದ ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಸಾಮಾನ್ಯ ರನ್ನು ಕಂಗಾಲಾಗಿಸಿದೆ.
ಒಂದೂವರೆ ತಿಂಗಳಿಂದಲೂ ಮಳೆ ಯಾಗುತ್ತಿದ್ದು, 2 ವಾರಗಳಿಂದಂತೂ ಎಡಬಿಡದೆ ಸುರಿಯುತ್ತಿದೆ. ಇದರಿಂದ ರೈತರ ಬೆಳೆ ನಷ್ಟವಾಗಿರುವ ಪರಿಣಾಮ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಜನರ ಬದು ಕಿಗೆ ಬರೆ ಎಳೆದಂತಾಗಿದೆ. ಮೂರು ಹೊತ್ತು ರುಚಿಕರವಾದ ಊಟ ಮಾಡುವುದಕ್ಕೂ ತಿಣುಕಾಡುವಂತಾಗಿದೆ. ಒಂದೆರಡು ರೀತಿಯ ತರಕಾರಿ, ಸೊಪ್ಪು ಕೊಳ್ಳುವುದಕ್ಕೆ ನೂರಾರು ರೂ. ಬೇಕೆಂದು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ನೂರರತ್ತ ಟೊಮಾಟೋ: ಕುಟುಂಬ ನಿರ್ವಹಣೆಗೆ ಗಂಡ-ಹೆಂಡತಿ ಇಬ್ಬರೂ ಸಣ್ಣ ಪುಟ್ಟ ಕೆಲಸಕ್ಕೆ ಹೋಗುವುದು ಈಗ ಸಾಮಾನ್ಯವಾಗಿ ಕಾಣಬಹುದು. ಮಕ್ಕಳನ್ನು ಶಾಲೆಗೆ ತಯಾರಿ ಮಾಡಿ, ಮನೆ ಕೆಲಸ ವನ್ನು ಮುಗಿಸಿ, ಕೆಲಸಕ್ಕೆ ಹೋಗುವ ತರಾ ತುರಿಯಲ್ಲಿ ಟೊಮಾಟೋ ಹಾಕಿ ಬಾತ್ ಹಾಗೂ ಸಾಂಬಾರ್ ಮಾಡಿ ಕೆಲಸಕ್ಕೆ ಹೊರಡುವುದು ಈಗ ಸುಲಭವಲ್ಲ. ಕಾರಣ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆಜಿ ಟೊಮಾಟೋ ದರ 70-80 ರೂ.ಗೆ ಏರಿಕೆಯಾಗಿದೆ. ಹೀಗೆಯೇ ಮಳೆ ಮುಂದುವರೆದರೆ ಟೊಮಾಟೋ ಬೆಲೆ ನೂರರ ಗಡಿ ದಾಟಿದರೂ ಅಚ್ಚರಿ ಯಿಲ್ಲ. ಕೋಲುಗಳನ್ನು ನೆಟ್ಟು, ಗಿಡಗಳನ್ನು ಮೇಲಕ್ಕೆತ್ತಿ ದಾರದಲ್ಲಿ ಕಟ್ಟಿ ವ್ಯವಸ್ಥಿತವಾಗಿ ಬೆಳೆದಿರುವ ರೈತರಿಗೆ ಮಾತ್ರ ಫಸಲು ಕೈ ಸೇರುತ್ತಿದೆ. ಸಹಜ ರೀತಿಯಲ್ಲಿ ಬೆಳೆದ ಟೊಮೋಟೋ ಗಿಡಗಳೆಲ್ಲಾ ಮಳೆಯಿಂದ ಸಂಪೂರ್ಣವಾಗಿ ಹಾಳಾಗಿ ಫಸಲು ಮಣ್ಣು ಪಾಲಾಗಿದೆ. ಉತ್ಪನ್ನ ಕಡಿಮೆಯಾಗಿರು ವುದರಿಂದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಲೇ ಇದೆ.

ಕೈ ಸುಡುವ ಸೊಪ್ಪು: ತರಕಾರಿ ಜೊತೆಗೆ ಸೊಪ್ಪುಗಳ ಬೆಲೆಯೂ ಜಾಸ್ತಿಯಾಗಿದೆ. ಹಾವು-ಏಣಿ ಆಟದಂತೆ ಹಲವು ದಿನಗ ಳಿಂದ ಕೊತ್ತಂಬರಿ ಸೊಪ್ಪಿನ ಬೆಲೆಯಲ್ಲಿ ಏರಿಕೆ-ಇಳಿಕೆ ಕಾಣಬಹುದು. ಈಗಲೂ ಸಣ್ಣ ಕಂತೆ ಕೊತ್ತಂಬರಿ ಸೊಪ್ಪಿಗೆ 5 ರೂ., ಸ್ವಲ್ಪ ದೊಡ್ಡದಿದ್ದರೆ 10 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಸಪ್ಸಿಗೆ, ಪುದಿನಾ, ಪಾಲಕ್ ಸೊಪ್ಪಿನ 1 ಕಟ್ಟಿಗೆ 10 ರೂ. ತೆರಬೇಕಾಗಿದೆ. ಇನ್ನುಳಿದ ಸೊಪ್ಪುಗಳೂ ದುಬಾರಿಯಾಗಿದೆ.
`ಈ ಬಾರಿ ತುಂಬಾ ಮಳೆ ಬರುತ್ತಿದೆ. ಇದರಿಂದ ಬೆಳೆಯೆಲ್ಲಾ ಹಾಳಾಗಿರುವುದ ರಿಂದ ತರಕಾರಿ, ಸೊಪ್ಪಿನ ಬೆಲೆಯಲ್ಲಿ ಏರಿಕೆ ಯಾಗಿದೆ.

ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ತುಂಬಾ ಕಡಿಮೆಯಾಗಿದೆ. ಇದ ರಿಂದ ಸಹಜವಾಗಿ ಬೇಡಿಕೆ ಹೆಚ್ಚಿರುವುದ ರಿಂದ ಬೆಲೆಯೂ ಹೆಚ್ಚಾಗಿದೆ. ಮಳೆ ನಿರಂ ತರವಾಗಿ ಸುರಿಯುತ್ತಿರುವುದರಿಂದ ಉತ್ಪನ್ನ ಕಡಿಮೆಯಾಗುತ್ತದೆ, ಹೊಸದಾಗಿ ನಾಟಿ ಮಾಡಲಾಗುವುದಿಲ್ಲ. ಪರಿಣಾಮ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಮಹಾತ್ಮ ಗಾಂಧಿ ರಸ್ತೆ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡುವ ರಮೇಶ್ ಅಭಿ ಪ್ರಾಯ ವ್ಯಕ್ತಪಡಿಸಿದರು.

ರೈತರಿಗೂ ನಷ್ಟವೆ: ತರಕಾರಿ, ಸೊಪ್ಪಿನ ಬೆಲೆ ಹೆಚ್ಚಾದಾಗ ರೈತರಿಗೆ ಒಳ್ಳೆಯ ಲಾಭ ಸಿಗುತ್ತದೆ ಎಂಬ ಭಾವನೆ ಸಹಜವಾಗಿ ಮೂಡುತ್ತದೆ. ಆದರೆ ಮಳೆಯಿಂದ ರೈತ ರಿಗೂ ತುಂಬಾ ನಷ್ಟವಾಗಿದೆ. ಸಾಲ ಮಾಡಿ ಬಿತ್ತಿರುವ ಅನ್ನದಾತ ಬೆಳೆ ಕೈ ಸೇರುವ ಹೊತ್ತಲ್ಲಿ ಕಳೆದುಕೊಳ್ಳುತ್ತಿದ್ದಾನೆ. ಮಳೆ ಹೊಡೆತದಿಂದ ನಿರೀಕ್ಷಿಸಿದ್ದಷ್ಟು ಫಲ ಕೈಸೇರಿಲ್ಲ. ಅಳಿದುಳಿದ ಉತ್ಪನ್ನಕ್ಕೆ ಒಳ್ಳೆಯ ಬೆಲೆ ಸಿಗುತ್ತಿದೆಯಾದರೂ ಅದಕ್ಕಿಂತ ಮೂರ್ನಾಲ್ಕು ಪಟ್ಟು ಫಲ ಹಾಳಾಗಿದೆ. ಸಹಜ ರೀತಿಯಲ್ಲಿ ಬೆಳೆದ ರೈತರಂತೂ ಕಣ್ಮುಂ ದೆಯೇ ಬೆಳೆ ಮಣ್ಣುಪಾಲಾಗುತ್ತಿದ್ದರೂ ಉಳಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ಒಟ್ಟಾರೆ ಮಳೆ, ಬೆಳೆಯುವವರು ಹಾಗೂ ಕೊಳ್ಳುವವರಿಗೂ ಸಂಕಷ್ಟ ಹೆಚ್ಚಿಸಿದೆ.

Translate »