ಕಫ್ರ್ಯೂ ನಿಯಮ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ
ಮಂಡ್ಯ

ಕಫ್ರ್ಯೂ ನಿಯಮ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ

April 24, 2021

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಕಠಿಣ ಕ್ರಮ
ಅಗತ್ಯ ವಸ್ತು ಬಿಟ್ಟು, ಉಳಿದ್ಯಾವ ಅಂಗಡಿಗಳು ತೆರೆಯುವಂತಿಲ್ಲ
ಜನ ದಟ್ಟಣೆ ಕಡಿಮೆಗೊಳಿಸಲು ಸಿಟಿ ಮಾರುಕಟ್ಟೆ ವಿಸ್ತರಣೆ
ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ 4 ಜನರಿಗಿಂತ ಹೆಚ್ಚು ಸೇರುವಂತಿಲ್ಲ
ಸರ್ಕಾರದ ನಿಯಮ ಪಾಲಿಸದಿದ್ದರೆ ದಂಡ, ಕೇಸ್ ಪಕ್ಕಾ
ಜಿಲ್ಲೆಯ ಕೋವಿಡ್ ಸೆಂಟರ್‍ಗಳಲ್ಲಿ ಆಮ್ಲಜನಕದ ಕೊರತೆ ಇಲ್ಲ

ಜನರಿಗೆ ತಿಳುವಳಿಕೆ ಮೂಡಿಸಲು ಸಲಹೆ
ಮಂಡ್ಯ, ಏ.23- ಸಾರ್ವಜನಿಕರೊದಿಗೆ ವಾಗ್ವಾದ ಮಾಡುವುದಕ್ಕಿಂತ ತಿಳುವಳಿಕೆ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಕೊವಿಡ್ ವಾರಿಯರ್ಸ್ ಸೌಹಾರ್ಧಯುತವಾಗಿ ನಡೆದುಕೊಳ್ಳಬೇಕು. ಎಲ್ಲಕ್ಕಿಂತ ಪ್ರಮುಖ ವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತಿಳಿಸಿದರು.
ಕೊರೊನಾ ನಿಯಂತ್ರಣ ಸಂಬಂಧ ಮಂಡ್ಯ ಜಿಲ್ಲೆಯ ಮತ್ತು ತಾಲೂಕು ಅಧಿಕಾರಿಗಳ ಜೊತೆ ವಿಕಾಸಸೌಧದಿಂದ ವಿಡಿಯೊಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು, ಜಿಲ್ಲೆಯಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಶ್ರಮವಹಿಸಿ, ಪ್ರತಿ ತಾಲೂಕಿನಲ್ಲೂ ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಿ. ಯಾವುದೆ ಪರಿಸ್ಥಿತಿಯಲ್ಲೂ ಜಿಲ್ಲೆಯಲ್ಲಿ ಸಮಸ್ಯೆ ಎದುರಾಗದಂತೆ ನೋಡಿ ಕೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಆಕ್ಸಿಜನ್ ವ್ಯವಸ್ಥೆ ಇರುವ ಆಂಬುಲೆನ್ಸ್ ಪ್ರತಿ ತಾಲೂಕಿನಲ್ಲೂ ಲಭ್ಯವಿರಬೇಕು. ಕೊರೊನಾ ಟೆಸ್ಟಿಂಗ್ ಮಾಡಿಸಿದವರು ಫಲಿತಾಂಶ ಬರುವ ತನಕ ಕ್ವಾರಂಟೈನ್ ಆಗಿರುವಂತೆ ನೋಡಿಕೊಳ್ಳಬೇಕು. ಅಲ್ಲದೆ ಆಸ್ಪತ್ರೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಎರಡು ದಿನಗಳಲ್ಲಿ ಖರೀದಿಸಬೇಕು ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.

ಹೆಚ್ಚುವರಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ: ಜಿಲ್ಲಾ ಕೇಂದ್ರ ಮಂಡ್ಯದಲ್ಲಿ ಹೆಚ್ಚುವರಿಯಾಗಿ ಎರಡು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೆ ಪ್ರತಿ ತಾಲೂಕು ಕೇಂದ್ರದಲ್ಲೂ ಎರಡಕ್ಕಿಂತ ಹೆಚ್ಚು ಸುಸಜ್ಜಿತ ಆಂಬ್ಯುಲೆನ್ಸ್ ವ್ಯವಸ್ಥೆ ಇರಬೇಕು. ಜಿಲ್ಲೆಯಲ್ಲಿ ಪಿಪಿಇ ಕಿಟ್, ಗ್ಲೌಸ್, ಸ್ಯಾನಿಟೈಸರ್ ಸೇರಿದಂತೆ ಯಾವುದು ಕೂಡ ಕೊರತೆ ಆಗಬಾರದು. ಸ್ಟೆಪ್ ಅಪ್ ಆಸ್ಪತ್ರೆಗಳು, ಸಂಪೂರ್ಣ ವ್ಯವಸ್ಥೆಯೊಂದಿಗೆ ಎರಡು ದಿನಗಳಲ್ಲಿ ಸಿದ್ಧವಾಗಿ ರಬೇಕು ಎಂದು ಸಚಿವರು ಹೇಳಿದರು. ಜಿಲ್ಲಾಧಿಕಾರಿ ಡಾ. ಅಶ್ವಥಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ಜಿಪಂ ಸಿಇಒ ಜುಲ್ಪಿಕರ್ ಉಲ್ಲಾ, ಅಪರ ಜಿಲ್ಲಾಧಿಕಾರಿ ಶೈಲಜಾ, ಉಪವಿಭಾಗಾಧಿಕಾರಿಗಳಾದ ಶಿವಾನಂದ ಮೂರ್ತಿ ಮತ್ತು ಐಶ್ವರ್ಯ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲ ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಡ್ಯ, ಏ.23(ಮೋಹನ್‍ರಾಜ್)- ಜಿಲ್ಲೆ ಯಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಕಫ್ರ್ಯೂ ನಿಯಮ ಗಳನ್ನು ಕಠಿಣವಾಗಿ ಪಾಲಿಸಲು ಮುಂದಾಗಿದ್ದು, ಸರ್ಕಾರದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂ ಗಣದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸರ್ಕಾರದ ಮಾರ್ಗಸೂಚಿಯಂತೆ ಮೇ 4ರ ಬೆಳಗ್ಗೆ 6ಗಂಟೆಯವರೆಗೂ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೂ ಒಳಪಡುವ ಪ್ರತಿ ಶುಕ್ರವಾರ ರಾತ್ರಿ 9ಗಂಟೆ ಯಿಂದ ಸೋಮವಾರ ಬೆಳಿಗ್ಗೆ 6ಗಂಟೆಯ ವರೆಗೂ ಕಫ್ರ್ಯೂ ಜಾರಿಯಲ್ಲಿರುತ್ತದೆ. ಜೊತೆಗೆ ಪ್ರತಿನಿತ್ಯ ರಾತ್ರಿ 9ಗಂಟೆಯಿಂದ ಬೆಳಿಗ್ಗೆ 6ರವರೆಗೂ ಕಫ್ರ್ಯೂ ಇರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಮನವಿ ನೀಡಿದರು.

ಅಲ್ಲದೆ, ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಯಲ್ಲಿರುವ ಪರಿಣಾಮ ಜಿಲ್ಲೆಯ ಎಲ್ಲಾ ಭಾಗದಲ್ಲೂ ನಾಲ್ಕು ಜನರಿಗಿಂತ ಹೆಚ್ಚು ಗುಂಪು ಗೂಡುವಂತಿಲ್ಲ. ಬಸ್ ನಿಲ್ದಾಣ, ಮದುವೆ ಸ್ಥಳಗಳಲ್ಲಿ ಮಾತ್ರ ನಾಲ್ಕು ಜನರ ಮೇಲೆ ಇರಲು ಅನುಮತಿ ಇದ್ದು, ಅಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಜೊತೆಗೆ ವೀಕೆಂಡ್ ಕಫ್ರ್ಯೂ ಸಂದರ್ಭದಲ್ಲಿ ಅವಶ್ಯಕತೆ ಇದ್ದರೆ ಮಾತ್ರ ಸಂಚರಿಸಿ, ಸುಮ್ಮನೆ ಸಂಚರಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಯಾವುದಕ್ಕಿಲ್ಲ ಅವಕಾಶ?: ಶಾಲಾ- ಕಾಲೇಜು, ಶೈಕ್ಷಣಿಕ ತರಬೇತಿ ಸಂಸ್ಥೆಗಳು, ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ, ಸ್ಪಾ, ಕ್ರೀಡಾ ಸಂಕೀರ್ಣ, ಸ್ಟೇಡಿಯಂ, ಸ್ವಿಮ್ಮಿಂಗ್ ಪೂಲ್, ಮನರಂಜನೆ, ಉದ್ಯಾನವನ, ಕ್ಲಬ್‍ಗಳು, ಚಿತ್ರಮಂದಿರ, ಬಾರ್, ಸಭಾಂಗಣ, ಧಾರ್ಮಿಕ ಪೂಜಾ ಸ್ಥಳಗಳಿಗೆ ಸಾರ್ವ ಜನಿಕರಿಗೆ ನಿಷೇಧ, ರೆಸ್ಟೋರೆಂಟ್ ಹಾಗೂ ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಅವಕಾಶ.

ಯಾವುದಕ್ಕೆ ಅವಕಾಶ?: ಬಾರ್, ವೈನ್ ಶಾಪ್, ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ, ಕ್ರೀಡಾಕೂಟಗಳನ್ನು ಆಯೋಜಿಸಿದರೆ ಪ್ರೇಕ್ಷಕರಿಲ್ಲದೇ ಆಯೋಜಿ ಸಬಹುದಾಗಿದೆ. ತರಬೇತಿ ಉದ್ದೇಶಕ್ಕಾಗಿ ಈಜುಕೊಳಗಳನ್ನು ಕ್ರೀಡಾ ವ್ಯಕ್ತಿಗಳಿಗಾಗಿ ತೆರೆಯಲು ಅವಕಾಶ ನೀಡಿದ್ದು, ನ್ಯಾಯಬೆಲೆ ಅಂಗಡಿ, ಕಿರಾಣಿ ಅಂಗಡಿ, ದಿನಸಿ, ಹಣ್ಣು ತರಕಾರಿ, ಡೈರಿ, ಹಾಲಿನ ಬೂತ್‍ಗಳು, ಮಾಂಸ, ಮೀನು, ಪಶು ಆಹಾರ ಅಂಗಡಿಗಳಿಗೆ, ತರಕಾರಿ, ಹೂವು, ಹಣ್ಣು ಮಾರುಕಟ್ಟೆಗಳಿಗೆ ಅವಕಾಶ ನೀಡಿದೆ. ಆದರೆ ಷರತ್ತನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು. ವಸತಿ ಸೌಕರ್ಯದ ಹೋಟೆಲ್ ಗಳಲ್ಲಿ ಅತಿಥಿ ಸೇವೆಗೆ ಮಾತ್ರ ಅವಕಾಶವಿದ್ದು, ವೈನ್‍ಸ್ಟೋರ್‍ಗಳು ಕೇವಲ ಪಾರ್ಸಲ್‍ಗೆ ಸೀಮಿತ.

ಇನ್ನು ಆಹಾರ ಸಂಸ್ಕರಣೆ, ಕೃಷಿ ವಸ್ತುಗಳು, ಕೈಗಾರಿಕಾ ವಸ್ತುಗಳು ಹಾಗೂ ಕಾರ್ಖಾನೆ ಗಳು ನಡೆಯಲು ಅವಕಾಶ ನೀಡಿದ್ದು, ಬ್ಯಾಂಕ್, ಎಟಿಎಂಗಳಿಗೆ ನಿರ್ಬಂಧವಿಲ್ಲ. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದವರಿಗೂ ಯಾವುದೇ ನಿರ್ಬಂಧವಿರುವುದಿಲ್ಲ. ಜೊತೆಗೆ ಉಗ್ರಾಣ ಸೇವೆಗೂ ಯಾವುದೇ ಸಮಸ್ಯೆ ಇಲ್ಲ. ಕ್ಷೌರ ದಂಗಡಿಗಳಿಗೂ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಇನ್ನು ಜನ ದಟ್ಟಣೆ ಇರುವ ಮಂಡ್ಯ ನಗರದ ಸಿಟಿ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿದ್ದು, ಪೇಟೆ ಬೀದಿಯ ಮಾರು ಕಟ್ಟೆಯ ಜೊತೆಗೆ ಷುಗರ್ ಟೌನ್, ಸ್ವರ್ಣ ಸಂದ್ರ ರಂಗಮಂದಿರ, ಸರ್ ಎಂ.ವಿ. ಕ್ರೀಡಾಂಗಣಕ್ಕೆ ಮಾರುಕಟ್ಟೆಯನ್ನು ವಿಸ್ತರಿಸಲಾಗಿದೆ ಎಂದ ಅವರು, ಕಫ್ರ್ಯೂ ಸಂದರ್ಭದಲ್ಲಿ ತುರ್ತು ಕೆಲಸಕ್ಕೆ ಅಥವಾ ಉದ್ಯೋಗಕ್ಕೆ ತೆರಳುವವರು ಸಂಬಂಧಿಸಿದ ಐಡಿ ಕಾರ್ಡ್ ಹೊಂದಿರಬೇಕೆಂದು ಹೇಳಿದರು.

ಜೊತೆಗೆ ಮಂಡ್ಯದಲ್ಲಿ ಕೋವಿಡ್ ಕಡಿಮೆ ಗೊಳಿಸಲು ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಎಲ್ಲೂ ಕೂಡ ಆಮ್ಲಜನಕದ ಕೊರತೆ ಇಲ್ಲ. ಕೊರೊನಾ ಬಗೆ ಯಾರು ನಿರ್ಲಕ್ಷ್ಯ ತೋರದೆ ರೋಗದ ಲಕ್ಷಣಗಳಿದ್ದರೆ ಆಸ್ಪತ್ರೆಗೆ ಬಂದು ತೋರಿಸುವಂತೆ ಮನವಿ ಮಾಡಿ ದರು. ಗೋಷ್ಟಿಯಲ್ಲಿ ಎಸ್ಪಿ ಡಾ.ಅಶ್ವಿನಿ, ಸಿಇಓ ಜುಲ್ಫೀಕರ್ ಉಲ್ಲಾ, ವಾರ್ತಾಧಿ ಕಾರಿ ಟಿ.ಹರೀಶ್ ಇತರರಿದ್ದರು.

Translate »