ಮಂಡ್ಯದ ಸಿದ್ಧಾರ್ಥ ಚಿತ್ರಮಂದಿರ ನೆಲಸಮ
ಮಂಡ್ಯ

ಮಂಡ್ಯದ ಸಿದ್ಧಾರ್ಥ ಚಿತ್ರಮಂದಿರ ನೆಲಸಮ

April 24, 2021

1987ರಲ್ಲಿ ಅಂಬರೀಷ್‍ರಿಂದ ಉದ್ಘಾಟನೆಗೊಂಡಿದ್ದ ಚಿತ್ರಮಂದಿರ, ಥಿಯೇಟರ್ ಇದ್ದ ಜಾಗದಲ್ಲಿ ತಲೆ ಎತ್ತಲಿದೆ ಬೃಹತ್ ಮಾಲ್
ಮಂಡ್ಯ, ಏ.23(ಎಂ.ಕೆ.ಮೋಹನ್‍ರಾಜ್)- ಕೊರೊನಾ ಆರ್ಭಟ, ಪ್ರೇಕ್ಷಕರ ಕೊರತೆ ಹಾಗೂ ಓಟಿಟಿ ಹಾವಳಿಯಿಂದ ಸಿಬ್ಬಂದಿಗೆ ಸಂಬಳ ನೀಡಲೂ ಆಗದ ಪರಿಸ್ಥಿತಿಯ ಹಿನ್ನಲೆ ಯಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಪ್ರದರ್ಶನಗೊಳಿಸಿ ಮಂಡ್ಯ ಜನರ ಮನೆ ಮಾತಾಗಿದ್ದ ಪ್ರತಿಷ್ಟಿತ ಸಿದ್ಧಾರ್ಥ ಚಿತ್ರ ಮಂದಿರವು ಇನ್ನು ನೆನಪು ಮಾತ್ರ. ಚಿತ್ರ ಮಂದಿರದ ಮಾಲೀಕರು ಥಿಯೇಟರ್ ಅನ್ನು ನೆಲಸಮಗೊಳಿಸುತ್ತಿದ್ದು, ಶೀಘ್ರವೇ ಈ ಜಾಗದಲ್ಲಿ ಬೃಹತ್ ಮಾಲ್ ತಲೆ ಎತ್ತಲಿದೆ.

1987ರಲ್ಲಿ ಮಂಡ್ಯದಲ್ಲಿ ಮೊದಲ ಚಿತ್ರಮಂದಿರ (ಮಂಡ್ಯ ಟಾಕೀಸ್) ನಿರ್ಮಾಣ ಮಾಡಿದ ಕೀರ್ತಿಗೆ ಭಾಜನ ರಾಗಿದ್ದ ಮಹೇಶ್ ಎಂಬುವÀರ ಮಾಲಿಕತ್ವ ದಲ್ಲಿ ಸಿದ್ಧಾರ್ಥ ಚಿತ್ರಮಂದಿರವನ್ನು ತೆರೆಯ ಲಾಗಿತ್ತು. ಮೂಲತ: ಮಹೇಶ್ ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿರುವ ಸಂಜಯ ಚಿತ್ರಮಂದಿರ ವನ್ನು ನಿರ್ಮಿಸಿದವರು. 1957ರಲ್ಲಿ ಮಂಡ್ಯ ಟಾಕೀಸ್ ಎಂಬ ಹೆಸರಿ ನಲ್ಲಿ ಚಿತ್ರಮಂದಿರ ತೆರೆದು ಅದಾದ ಹತ್ತು ವರ್ಷದ ಬಳಿಕ ನವೀಕರಣಗೊಳಿಸಿ ಚಿತ್ರಮಂದಿರದ ಹೆಸರನ್ನು ಸಂಜಯ ಎಂದು ನವೀಕರಣಗೊಳಿಸಲಾಗಿತ್ತು. ಬಳಿಕ ಮಹೇಶ್ ಮಾಲೀಕತ್ವದಲ್ಲಿ ಸಿದ್ಧಾರ್ಥ ಚಿತ್ರಮಂದಿರವನ್ನು ತೆರೆಯಲಾಯಿತು.
1987ರ ಸೆಪ್ಟೆಂಬರ್‍ನಲ್ಲಿ ಮಂಡ್ಯ ದವರೇ ಆದ ರೆಬಲ್‍ಸ್ಟಾರ್ ಡಾ.ಅಂಬ ರೀಷ್ ಸಿದ್ಧಾರ್ಥ ಥಿಯೇಟರ್ ಅನ್ನು ಉದ್ಘಾಟನೆಗೊಳಿಸಿದ್ದರು. ಮೊದಲ ಸಿನಿಮಾವಾಗಿ ಡಾ.ರಾಜ್‍ಕುಮಾರ್ ಅಭಿನಯದ ಶ್ರೀನಿವಾಸ ಕಲ್ಯಾಣ ಸಿನಿಮಾ ಸಾಂಕೇತಿಕವಾಗಿ ಒಂದು ವಾರಗಳ ಕಾಲ ಪ್ರದರ್ಶನ ಕಂಡಿತು. ಆ ಬಳಿಕ ಅಂಬರೀಷ್ ಅಭಿನಯದ ಇಂದ್ರಜಿತ್ ಬರೋಬ್ಬರಿ 25 ವಾರಗಳ ಕಾಲ ಪ್ರದರ್ಶನ ಕಂಡು ಸಿದ್ಧಾರ್ಥ ಚಿತ್ರಮಂದಿರದಲ್ಲಿ ಮೊದಲ ಬಾರಿಗೆ 25 ವಾರ ಪ್ರದರ್ಶನ ಕಂಡ ಸಿನಿಮಾ ಎನಿಸಿಕೊಂಡಿತು. ಡಾ.ರಾಜ್ ಕುಮಾರ್ ಕುಟುಂಬಕ್ಕೆ ಹತ್ತಿರವಾಗಿದ್ದ ಮಹೇಶ್ ಅವರ ಸಂಜಯ ಚಿತ್ರ ಮಂದಿರಕ್ಕೆ ರಾಜ್ ಸಿನಿಮಾಗಳು ಅತಿ ಹೆಚ್ಚು ಪ್ರದರ್ಶನಕ್ಕೆ ಸೀಮಿತಗೊಂಡರೆ, ಉಳಿದಂತೆ ಡಾ.ವಿಷ್ಣು ವರ್ಧನ್, ಅಂಬ ರೀಷ್, ಶಂಕರ್‍ನಾಗ್, ಶಿವರಾಜ್ ಕುಮಾರ್, ರವಿಚಂದ್ರನ್, ದರ್ಶನ್, ಪುನೀತ್ ರಾಜ್‍ಕುಮಾರ್, ಯಶ್ ಸಿನಿಮಾಗಳಿಗೆ ಸಿದ್ದಾರ್ಥ ಚಿತ್ರಮಂದಿರ ಹೆಸರಾಗಿತ್ತು. ಮಂಡ್ಯ ನಗರದಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಮಂದಿರಗಳು ಈ ಹಿಂದೆ ಇತ್ತು. ಆದರೆ ಪ್ರೇಕ್ಷಕರ ಕೊರತೆಯಿಂದ ಒಂದೊಂದೇ ಚಿತ್ರಮಂದಿರಗಳು ಮುಚ್ಚುತ್ತಾ ಬಂದಿದ್ದು, ಗಿರಿಜಾ, ರಾಮಕೃಷ್ಣ, ಧರ್ಮಶ್ರೀ, ವಿನಾಯಕ ಚಿತ್ರಮಂದಿರ ಬಂದ್ ಆಗಿದೆ. ಇನ್ನು ಜಯಲಕ್ಷ್ಮಿ ಚಿತ್ರಮಂದಿರ ಮುಚ್ಚಿ ಮತ್ತೆ ಪುನರಾರಂಭಗೊಂಡರೆ ಉಳಿದಂತೆ ಗುರುಶ್ರೀ, ಸಂಜಯ, ಮಹಾವೀರ, ನಂದಾ ಚಿತ್ರಮಂದಿರಗಳು ಪ್ರದರ್ಶನಕ್ಕೆ ಸೀಮಿತವಾಗಿವೆ. ಒಟ್ಟಾರೆ ಒಂದು ಕಾಲದಲ್ಲಿ ಕನ್ನಡ ಚಿತ್ರ ಗಳಿಗೆ ಮಂಡ್ಯ ಆದಾಯದ ಸೆಂಟರ್ ಆಗಿತ್ತು. ಆದರೆ ಪ್ರಸ್ತುತ ಪ್ರೇಕ್ಷಕರ ಕೊರತೆಯಿಂದ ಒಂದೊಂದೇ ಚಿತ್ರಮಂದಿರಕ್ಕೆ ಬೀಗ ಹಾಕುತ್ತಿರುವುದು ವಿಪರ್ಯಾಸ.

 

Translate »