ಡಿ ಗ್ರೂಪ್ ನೌಕರೆ ಅಮಾನತು: ಜಿಲ್ಲಾಡಳಿತದಿಂದ ಕಣ್ಣೊರೆಸುವ ಕೆಲಸ
ಮೈಸೂರು

ಡಿ ಗ್ರೂಪ್ ನೌಕರೆ ಅಮಾನತು: ಜಿಲ್ಲಾಡಳಿತದಿಂದ ಕಣ್ಣೊರೆಸುವ ಕೆಲಸ

July 13, 2021

ತಿ.ನರಸೀಪುರ, ಜು.12(ಎಸ್‍ಕೆ)- ಪಟ್ಟಣದ ಪುರಸಭೆಯಲ್ಲಿ ಬಾಬು ಜಗಜೀವನರಾಂ ಪುಣ್ಯಸ್ಮರಣೆ ವೇಳೆ ಬಾಬೂಜಿ ಅವರಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಜಿಲ್ಲಾಡಳಿತ ಡಿ ಗ್ರೂಪ್ ನೌಕರೆಯನ್ನು ಅಮಾನತುಗೊಳಿಸುವ ಮೂಲಕ ಪ್ರತಿಭಟನಾನಿರತರ ಕಣ್ಣೊರೆಸುವ ಕೆಲಸ ಮಾಡಿದೆ ಎಂದು ಪುರಸಭಾ ಸದಸ್ಯ ಅರ್ಜುನ್ ರಮೇಶ್ ಆರೋಪಿಸಿದರು.

ಪಟ್ಟಣದ ಪಿಡಬ್ಲ್ಯೂಡಿ ಅತಿಥಿ ಗೃಹದಲ್ಲಿ ಪ್ರತಿಭಟನೆಗೆ ಸಹಕಾರ ನೀಡಿದ ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು ಅಭಿನಂದಿಸಿ ಮಾತನಾಡಿದ ಅವರು, ಪುರಸಭೆಯಲ್ಲಿ ಬಾಬೂಜಿ ಅವರಿಗೆ ಅಪಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ 4 ದಿನಗಳಿಂದ ಪ್ರತಿಭಟನೆ ನಡೆಸಲಾಯಿತು. ಯಾವುದೇ ಪ್ರತಿಭಟನೆ ಒಂದೆರಡು ದಿನಕ್ಕೆ ಹಳ್ಳ ಹಿಡಿಯುತ್ತವೆ. ಆದರೆ ನಾವಿಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಧರಣಿ ನಡೆಸಿ ಯಶ ಸಾಧಿಸಿದ್ದೇವೆ. ಆದರೆ ಇಲ್ಲಿ ಜಿಲ್ಲಾಡಳಿತ ಸಿಸಿ ಟಿವಿ ಫುಟೇಜ್ ಆಧಾರದ ಮೇಲೆ ಡಿ ಗ್ರೂಪ್ ನೌಕರೆ ಸವಿತಾ ಅವರನ್ನು ಅಮಾನತುಗೊಳಿಸಿ ಘಟನೆಗೆ ಕಾರಣರಾಗಿರುವವರ ರಕ್ಷಣೆಗೆ ಮುಂದಾಗಿದೆ ಎಂದು ಆರೋಪಿಸಿದರು.

ನಮ್ಮ ಪ್ರತಿಭಟನೆಗೆ ಸ್ವಲ್ಪ ಮಟ್ಟಿನ ನ್ಯಾಯ ಸಿಕ್ಕಿದೆ ಎಂಬ ಸಮಾಧಾನ ವಿದ್ದರೂ, ಘಟನೆಗೆ ತಹಶೀಲ್ದಾರ್ ಬಹುಮುಖ್ಯ ಹೊಣೆಗಾರರು. ಏಕೆಂದರೆ ಪ್ರಭಾರ ಮುಖ್ಯಾಧಿಕಾರಿಯಾಗಿ ತಹಶೀಲ್ದಾರ್‍ಗೆ ಪುರಸಭೆ ಅಧಿಕಾರ ವಹಿಸಲಾಗಿತ್ತು. ಅಲ್ಲದೇ ಜಿಲ್ಲಾಧಿಕಾರಿಗಳ ಉಲ್ಲೇಖ ಪತ್ರದಲ್ಲೂ ಮುಖ್ಯಾಧಿಕಾರಿಗಳ ತಪ್ಪು ಕಂಡು ಬಂದಿದೆ ಎಂದು ಹೇಳಲಾಗಿದೆ. ಆದರೂ ತಹಶೀಲ್ದಾರ್ ಡಿ.ನಾಗೇಶ್ ತಲೆದಂಡವಾಗಿಲ್ಲ. ಕೇವಲ ಡಿ ಗ್ರೂಪ್ ನೌಕರೆ ಮಾತ್ರ ಕಣ್ಣಿಗೆ ಬಿದ್ದರೆ ಎಂದು ಪ್ರಶ್ನಿಸಿದರು. ಅಧಿಕಾರಿ ಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಜಿಲ್ಲಾಡಳಿತದಿಂದ ಆಗಿದೆ. ತಾಲೂಕಿನಲ್ಲಿ ಈಗಲೂ ದಲಿತರನ್ನು ನಿಕೃಷ್ಟವಾಗಿ ನಡೆಸಿ ಕೊಳ್ಳಲಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ ಎಂದರು. ಅಲ್ಲದೇ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರು ನಮ್ಮ ಪ್ರತಿಭಟನೆಗೆ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.

ಸದಸ್ಯ ಎಲ್.ಮಂಜುನಾಥ್ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಶುಕ್ರವಾರ ಡಿ ಗ್ರೂಪ್ ನೌಕರೆಯನ್ನು ಸಿಸಿ ಟಿವಿ ದೃಶ್ಯಗಳ ಆಧಾರದ ಮೇಲೆ ಅಮಾನತು ಮಾಡಲಾಗಿದೆ. ಆದರೆ ಅಂದು ತಹಶೀಲ್ದಾರ್ ಡಿ.ನಾಗೇಶ್ ಪ್ರಭಾರ ಮುಖ್ಯಾಧಿಕಾರಿಯಾಗಿದ್ದರು. ಅವರ ಮೇಲೆಯೂ ಕ್ರಮವಾಗಬೇಕು. ರಾಷ್ಟ್ರೀಯ ಹಬ್ಬಗಳನ್ನು ಪುರಸಭಾ ಕಚೇರಿಯಲ್ಲಿ ಆರೋಗ್ಯ ಇಲಾಖೆಯಿಂದ ಮಾಡಿಕೊಂಡು ಬರಲಾಗುತ್ತಿದೆ. ಡಿ.ಗ್ರೂಪ್ ನೌಕರೆ ಮಾಮೂಲಿನಂತೆ ಕಸ ಗುಡಿಸಿ ಟೇಬಲ್ ಕೆಳಗೆ ಪೆÇರಕೆ ಇಟ್ಟಿದ್ದಾರೆ. ಆದರೆ ಇದನ್ನು ಗಮನಿಸಿ ನಂತರ ಟೇಬಲ್ ಮೇಲೆ ಬಾಬೂಜಿ ಭಾವಚಿತ್ರ ಇಟ್ಟು ಪೂಜೆ ಮಾಡ ಬೇಕಾದದ್ದು ಆರೋಗ್ಯ ಇಲಾಖೆ ಜವಾಬ್ದಾರಿ. ಕೆಳಗೆ ಪೆÇರಕೆ ಇದ್ದರೂ ಯಾವ ಮಾನದಂಡದ ಮೇಲೆ ಮೇಜಿನ ಮೇಲೆ ಫೋಟೋ ಇಟ್ಟಿದ್ದಾರೆ. ಹಾಗಾಗಿ ಸವಿತಾ ಒಬ್ಬರೇ ಇಲ್ಲಿ ತಪ್ಪಿತಸ್ಥರಲ್ಲ. ಡಿ.ನಾಗೇಶ್ ಅವರೇ ಇದಕ್ಕೆ ಹೊಣೆಯಾಗುತ್ತಾರೆ. ಆದ್ದರಿಂದ ಘಟನೆಗೆ ಸಂಬಂಧಪಟ್ಟ ಉಳಿದವರ ಮೇಲೂ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಮಲಿಯೂರು ಶಂಕರ್, ಉಪಾಧ್ಯಕ್ಷ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಜಿ.ಎನ್.ಪುಟ್ಟಸ್ವಾಮಿ, ಖಜಾಂಚಿ ಬಿ.ಎಲ್. ಮಹದೇವ, ಸಿದ್ದ ಲಿಂಗ ಮೂರ್ತಿ, ಸಿ.ಡಿ. ವೆಂಕಟೇಶ್, ಸಿ.ಮಹ ದೇವ, ಮರಡೀಪುರ ಸಿದ್ದರಾಜು, ಕೇತಹಳ್ಳಿ ನಿಂಗರಾಜು, ಸಿದ್ದರಾಜು, ಹುಣಸೂರು ನಿಂಗರಾಜು, ಮಹದೇವಣ್ಣ, ತಬಲಾ ಮೂರ್ತಿ, ಭೈರಾಪುರ ನಿಂಗರಾಜು ಮತ್ತಿತರರಿದ್ದರು.

Translate »