ಮೈಸೂರು, ನ.2(ಪಿಎಂ)- ಕಾರ್ಖಾನೆಗಳ ಬದಲಿ ಕಾರ್ಮಿಕರು ನಿರಂತರವಾಗಿ ವರ್ಷಕಾಲ ಸೇವೆ ಪೂರ್ಣ ಗೊಳಿಸಿದರೆ, ಅವರಿಗೆ ಖಾಯಂ ಕಾರ್ಮಿಕರಿಗೆ ನೀಡುವ ಎಲ್ಲಾ ಸೌಲಭ್ಯ ಕಲ್ಪಿಸಬೇಕೆಂದು ಕೈಗಾರಿಕಾ ವಿವಾದಗಳ ಕಾಯ್ದೆಯಲ್ಲಿ ಸ್ಪಷ್ಟಪಡಿಸಿದ್ದರೂ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳತ್ತಿಲ್ಲ ಎಂದು ಜೆಕೆ ಟೈರ್ಸ್ ಲಿಮಿಟೆಡ್ (ವಿಕ್ರಾಂತ್) ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಪ್ರಮೋದ್ ಚಿಕ್ಕಮಣ್ಣೂರ್ ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಟಿಕೆ ಬಡಾವಣೆಯ ಬಿಸಿಲು ಮಾರಮ್ಮ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಾಮ್ರಾಜ್ಯ ಶಾಹಿ ವ್ಯವಸ್ಥೆಯ ಗುಲಾಮಗಿರಿ ಸಂಕೇತವಾಗಿ ಬದಲಿ- ದಿನಗೂಲಿ ಪದ್ಧತಿಯನ್ನು ಸರ್ಕಾರ ಇಂದಿಗೂ ಮುಂದು ವರೆಸುತ್ತಿದೆ. ಇಂತಹ ಶೋಷಣೆ ವ್ಯವಸ್ಥೆ ವಿರುದ್ಧ ದಿನಗೂಲಿ ನೌಕರರು ಸಂಘಟಿತ ಹೋರಾಟ ನಡೆಸಬೇಕು ಎಂದರು.
ವಿವಿಧ ಕಂಪನಿಗಳಲ್ಲಿ 15ರಿಂದ 20 ವರ್ಷಗಳಿಂದಲೂ ಬದಲಿ ಹಾಗೂ ದಿನಗೂಲಿ ಕಾರ್ಮಿಕರಾಗಿ ಪೂರ್ಣ ಪ್ರಮಾಣದ ಕೆಲಸ ಮಾಡುತ್ತಿದ್ದರೂ ಕನಿಷ್ಠ ಸೌಲಭ್ಯಗಳಾದ ರಜೆ, ವೈದ್ಯಕೀಯ ನೆರವು, ಕನಿಷ್ಠ ವೇತನ ನೀಡಲು ಮುಂದಾ ಗುತ್ತಿಲ್ಲ. ಕಾರ್ಮಿಕರ ಬಡತನದ ಲಾಭ ಪಡೆದು ಯಾವ ಸೌಲಭ್ಯಗಳನ್ನು ನೀಡದೇ ಶೋಷಣೆ ನಡೆಸಲಾಗುತ್ತಿದೆ. ಇಂತಹ ವ್ಯವಸ್ಥೆ ವಿರುದ್ಧ ದಿನಗೂಲಿ ಹಾಗೂ ಬದಲಿ ಕಾರ್ಮಿಕರು ಸಂಘಟಿತ ಹಾಗೂ ಜಾತ್ಯಾತೀತ ಹೋರಾಟ ನಡೆಸಬೇಕು ಎಂದರು. ಹೋರಾಟ ಮಾಡದಿದ್ದರೆ ಘೋಷಣೆಯಿಂದ ಮುಕ್ತಿ ದೊರೆಯದು. ಜೆಕೆ ಟೈರ್ಸ್‍ನಲ್ಲಿ ಬದಲಿ ಕಾರ್ಮಿಕರಲ್ಲಿ ಅನೇಕರು ಬೆನ್ನು ನೋವಿನಿಂದ ಬಳಲುತ್ತಿದ್ದು, ಇವರಿಗೆ ನೆರ ವಾಗಲು ಕಾರ್ಖಾನೆ ಆಡಳಿತ ವರ್ಗ ಮುಂದಾಗಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಎಂ.ವಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಮಂಜಪ್ಪಗೌಡ, ಸದಸ್ಯರಾದ ರಘು, ಗಿರೀಶ್, ಗಂಗಾಧರ್, ಬಿ.ಎಂ.ಶಿವಸ್ವಾಮಿ ಮತ್ತಿತರಿದ್ದರು.