ಆ.6ರಂದು ಬೆಂಗಳೂರಿನಲ್ಲಿ ದಲಿತ ಹಕ್ಕುಗಳ ರಕ್ಷಣಾ ರ‍್ಯಾಲಿ
ಮೈಸೂರು

ಆ.6ರಂದು ಬೆಂಗಳೂರಿನಲ್ಲಿ ದಲಿತ ಹಕ್ಕುಗಳ ರಕ್ಷಣಾ ರ‍್ಯಾಲಿ

August 4, 2018

ಮೈಸೂರು: ಬೆಂಗಳೂರಿನಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.6ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿರುವ ದಲಿತ ಹಕ್ಕುಗಳ ರಕ್ಷಣ ಮಹಾ ರ‍್ಯಾಲಿಯಲ್ಲಿ ಮೈಸೂರು ಜಿಲ್ಲೆಯಿಂದ 2 ಸಾವಿರಕ್ಕೂ ಹೆಚ್ಚು ದಲಿತರು ಪಾಲ್ಗೊಳ್ಳಲಿರುವುದಾಗಿ ಸಮಿತಿಯ ಮೈಸೂರು ಜಿಲ್ಲಾ ಪ್ರಧಾನ ಸಂಚಾಲಕ ನಿಂಗರಾಜ್ ಮಲ್ಲಾಡಿ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧದ ನೆಪದಲ್ಲಿ ಬಹುಸಂಖ್ಯಾತ ದಲಿತರ ಆಹಾರದ ಹಕ್ಕನ್ನು ಕಿತ್ತುಕೊಂಡು ಅಪಮಾನ, ದೌರ್ಜನ್ಯ, ಕೊಲೆ ಬಹಿರಂಗವಾಗಿ ನಡೆಯುತ್ತಿದೆ. ದಲಿತರ ನೌಕರರಿಗೆ ಬಡ್ತಿ ಮೀಡಲಾಗಿದೆ ಎಂದು ಅಂಕಿತ ಹಾಕಿದ್ದರೂ ಮುಖ್ಯಮಂತ್ರಿಗಳು ಅನುಷ್ಠಾನಗೊಳಿಸದೇ ದಲಿತ ನೌಕರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಖಂಡಿಸಿದರು.

ದಲಿತರ ಮೇಲಿನ ದೌಜನ್ಯ ಹಾಗೂ ಕಾಯ್ದೆಯ ದುರ್ಬಲತೆಯನ್ನು ಖಂಡಿಸಿ ಈ ರ‍್ಯಾಲಿ ನಡೆಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ದಲಿತರ ಅನೇಕ ಹಕ್ಕೊತ್ತಾಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದು ಹೇಳಿದರು.

ಅಂದು ಬೆಳಿಗ್ಗೆ ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ರ‍್ಯಾಲಿ ಹೊರಡಲಿದ್ದು, ಬಳಿಕ ಅಲ್ಲಿ ಬಹಿರಂಗ ಸಭೆ ನಡೆಯಲಿದೆ. ರ‍್ಯಾಲಿಗೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ದಲಿತರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯ ಬಸವಣ್ಣ, ಸೋಮಣ್ಣ ಬನ್ನಹಳ್ಳಿ, ಪುಟ್ಟಲಕ್ಷ್ಮಮ್ಮ, ಚಾಮರಾಜ ಇಲವಾಲ, ಬಸವರಾಜು ಉಪಸ್ಥಿತರಿದ್ದರು.

Translate »