ಆ.14ರಂದು ಬಿಜೆಪಿ ಯುವ ಮೋರ್ಚಾದಿಂದ ಮಿಡ್‍ನೈಟ್ ಫ್ರೀಡಂ ರನ್
ಮೈಸೂರು

ಆ.14ರಂದು ಬಿಜೆಪಿ ಯುವ ಮೋರ್ಚಾದಿಂದ ಮಿಡ್‍ನೈಟ್ ಫ್ರೀಡಂ ರನ್

August 4, 2018

ಮೈಸೂರು: ದೇಶದ ರಕ್ಷಣೆ ಹಾಗೂ ರಾಷ್ಟ್ರಾಭಿಮಾನದ ಸಂಕೇತ ವಾಗಿ ಆಗಸ್ಟ್ 14ರಂದು ರಾತ್ರಿ ಮೈಸೂರಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ `ಮಿಡ್‍ನೈಟ್ ಫ್ರೀಡಂ ರನ್’ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದನ್ನು ಯಶಸ್ವಿಗೊಳಿಸಬೇಕೆಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಭವನದಲ್ಲಿ ಇಂದು ಏರ್ಪಡಿಸಿದ್ದ ಮಿಡ್‍ನೈಟ್ ಫ್ರೀಡಂ ರನ್ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ನನಗೆ ರಾಜಕೀಯ ಜನ್ಮ ನೀಡಿದ ಮೈಸೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ಮಧ್ಯರಾತ್ರಿ ಮ್ಯಾರಥಾನ್ ನಡೆಸುವ ಮೂಲಕ ಯುವ ಜನರಲ್ಲಿ ದೇಶ ಪ್ರೇಮದ ಜಾಗೃತಿ ಮೂಡಿಸಲು ಕಾರ್ಯಕ್ರಮ ಏರ್ಪಡಿಸಿರುವುದಾಗಿ ತಿಳಿಸಿದರು.

ಅಂದು ರಾತ್ರಿ 12 ಗಂಟೆಗೆ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಆರಂಭವಾಗಿ ಹಾರ್ಡಿಂಜ್ ವೃತ್ತದ ಮೂಲಕ ಅರಮನೆ ಸುತ್ತಲಿನಲ್ಲಿ ರನ್ ಮಾಡಲಾಗುವುದು. ಅದರಲ್ಲಿ ಜಿಲ್ಲೆಯ ಸಾವಿರಾರು ಮಂದಿಯನ್ನು ಕರೆತರುವಂತೆಯೂ ಅವರು ಕಾಯಕರ್ತರಿಗೆ ಕರೆ ನೀಡಿದರು.

ಅದೇ ರೀತಿ ಆಗಸ್ಟ್ 10ರ ಕಡೇ ಆಷಾಢ ಶುಕ್ರವಾರದಂದು ಬೆಳಿಗ್ಗೆ 7 ಗಂಟೆಗೆ 2,000 ಮಂದಿ ಬಿಜೆಪಿ ಕಾರ್ಯಕರ್ತರು ಮೆಟ್ಟಿಲು ಮೂಲಕ ಚಾಮುಂಡಿಬೆಟ್ಟವೇರಿ ಮತ್ತೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗಲಿ ಎಂದು ತಾಯಿ ಚಾಮುಂಡೇಶ್ವರಿ ಯನ್ನು ಪ್ರಾರ್ಥಿಸಬೇಕೆಂದೂ ವಿಜಯೇಂದ್ರ ಇದೇ ಸಂದರ್ಭ ಕರೆ ನೀಡಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಹೆಚ್. ಮಂಜು ನಾಥ, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗೋಕುಲ್ ಗೋವರ್ಧನ್, ಮುಖಂಡ ರಾದ ತಮ್ಮೇಶ್‍ಗೌಡ, ರಾಕೇಶ, ಪರೀಕ್ಷಿತ ರಾಜೇ ಅರಸ್, ಶಿವಕುಮಾರ್, ಹೇಮಂತ್ ಕುಮಾರ್, ಹರ್ಷವರ್ಧನ, ದೇವರಾಜ್, ಮಂಗಳಾ, ಶೇಖರ್, ಪರಶಿವಮೂರ್ತಿ, ರಾಜೇಶ್ ಯಾದವ್, ಕೆ.ಜೆ.ರಮೇಶ್ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »