ಇಂದು ಮಧ್ಯರಾತ್ರಿ ಮೈಸೂರಲ್ಲಿ ಬಿಜೆಪಿ ಯುವ  ಮೋರ್ಚಾದಿಂದ ‘ಮಿಡ್‍ನೈಟ್ ಫ್ರೀಡಂ ರನ್’
ಮೈಸೂರು

ಇಂದು ಮಧ್ಯರಾತ್ರಿ ಮೈಸೂರಲ್ಲಿ ಬಿಜೆಪಿ ಯುವ  ಮೋರ್ಚಾದಿಂದ ‘ಮಿಡ್‍ನೈಟ್ ಫ್ರೀಡಂ ರನ್’

August 14, 2018

ಮೈಸೂರು:  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ವತಿಯಿಂದ ಆ.14ರ ಮಧ್ಯರಾತ್ರಿ ಮೈಸೂರು ನಗರದಲ್ಲಿ ‘ಮಿಡ್‍ನೈಟ್ ಫ್ರೀಡಂ ರನ್’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವ ಮೋರ್ಚಾ ರಾಜ್ಯಾಧ್ಯಕ್ಷರೂ ಆದ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ರಾಷ್ಟ್ರಧ್ವಜದ ಧ್ವಜಾರೋಹಣ ನೆರವೇರಿಸಲಾಗುವುದು. ಬಳಿಕ ಇಲ್ಲಿಂದ ಮಿಡ್ ನೈಟ್ ಫ್ರೀಡಂ ರನ್ ಆರಂಭವಾಗಿ ಮೈಸೂರು ಅರಮನೆಯ ಸುತ್ತ ಒಂದು ಸುತ್ತು ಬರಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಆ.14ರ ರಾತ್ರಿ 8.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಸಾಧನೆ ಕುರಿತ 32 ನಿಮಿಷಗಳ ಕಿರುಚಿತ್ರ ಪ್ರದರ್ಶನ ನಡೆಯಲಿದೆ. ಬಳಿಕ ಬಿಗ್‍ಬಾಸ್ ಖ್ಯಾತಿಯ ಚಂದನಶೆಟ್ಟಿ ಅವರ ಸಂಗೀತ ಕಾರ್ಯಕ್ರಮ ಇರಲಿದ್ದು, ನಂತರ ಈ ಓಟದ ಉದ್ದೇಶವೇನೆಂಬ ಬಗ್ಗೆ ಒಂದಿಷ್ಟು ಭಾಷಣ ಇರಲಿದೆ. ಓಟದಲ್ಲಿ ಸೆಲಬ್ರಿಟಿಗಳು ಪಾಲ್ಗೊಳ್ಳಲಿದ್ದು, ಸುಮಾರು 5 ಸಾವಿರ ಮಂದಿ ಓಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು.
ಮಿಡ್ ನೈಟ್ ರನ್ ಕಾರ್ಯಕ್ರಮವನ್ನು ಕಳೆದ ಎರಡು ವರ್ಷ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಮೈಸೂರಿನಲ್ಲಿ ಹಮ್ಮಿಕೊಂಡಿದ್ದು, ಇದರ ಜೊತೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು. ಯುವ ಮೋರ್ಚಾ ನಗರಾಧ್ಯಕ್ಷ ಗೋಕುಲ ಗೋವರ್ಧನ್, ಜಿಲ್ಲಾಧ್ಯಕ್ಷ ಶಿರೂರು ಶಿವು, ಮುಖಂಡರಾದ ದೇವರಾಜು, ಕೆ.ಜೆ.ರಮೇಶ್, ರಾಕೇಶ್, ಪರಶಿವಮೂರ್ತಿ ಗೋಷ್ಠಿಯಲ್ಲಿದ್ದರು.

Translate »