ಮನೆಗೊಂದು ಮರ, ಊರಿಗೊಂದು ತೋಪು…
ಮೈಸೂರು

ಮನೆಗೊಂದು ಮರ, ಊರಿಗೊಂದು ತೋಪು…

August 14, 2018

ಮೈಸೂರು:  ರಾಜ್ಯ ಸರ್ಕಾರದ `ಹಸಿರು ಕರ್ನಾಟಕ’ ಯೋಜನೆಯಡಿ `ಮನೆಗೊಂದು ಮರ, ಊರಿಗೊಂದು ತೋಪು, ತಾಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ವನ’ ಧ್ಯೇಯ ವಾಕ್ಯದಡಿ ಆ.15ರಿಂದ 18ರವರೆಗೆ ವಿವಿಧೆಡೆ ಸಸಿ ನೆಡುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ವೆಂಕಟೇಸನ್, ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ದ್ವಜಾರೋಹಣದ ನಂತರ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಗಿಡಕ್ಕೆ ನೀರೆರೆದು, ಕರ್ನಾಟಕ ನಾಮಫಲಕವಿರುವ ಹಸಿರು ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ಅರಣ್ಯ ನೀತಿಯನ್ವಯ ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಕನಿಷ್ಟ ಶೇ.33ರಷ್ಟು ಪ್ರದೇಶದಲ್ಲಿ ಹಸಿರು ಹೊದಿಕೆ ನಿರ್ಮಿಸಬೇಕಿದೆ. ಆದರೆ ಸದ್ಯ ಶೇ.22ರಷ್ಟು ಮಾತ್ರ ಹಸಿರು ಹೊದಿಕೆಯಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆ ಹಾಗೂ ಅಂತರ್ಜಲ ವೃದ್ಧಿಸುವ ಉದ್ದೇಶದೊಂದಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಯವ್ಯಯದಲ್ಲಿ `ಹಸಿರು ಕರ್ನಾಟಕ’ ಯೋಜನೆಯನ್ನು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಬೋಳು ಗುಡ್ಡಗಳು, ಗೋಮಾಳಗಳು, ಸರ್ಕಾರಿ ಜಮೀನುಗಳು, ಸರ್ಕಾರಿ ಇಲಾಖಾ ಕಚೇರಿಗಳ ಆವರಣ, ಶಾಲಾ-ಕಾಲೇಜುಗಳ ಆವರಣ, ರೈತರ ಭೂಮಿ, ಮನೆ ಆವರಣ ಸೇರಿದಂತೆ ಅವಕಾಶವಿರುವ ಸ್ಥಳಗಳಲ್ಲಿ ಸಸಿ ನೆಡುವ ಹಾಗೂ ಬೀಜದ ಉಂಡೆಗಳನ್ನು ಬಿತ್ತುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ಮಾತನಾಡಿ, ಮೈಸೂರು ನಗರದ ಎಲ್ಲ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಹಸಿರು ಕರ್ನಾಟಕ ಯೋಜನೆಯಡಿ ಒಂದು ಸಾವಿರ ಗಿಡಗಳಿಗೆ ಬೇಡಿಕೆ ಬಂದಿದೆ. ಗುಂಡಿ ತೆಗೆದಿರುವ ಬಗ್ಗೆ ಪರಿಶೀಲನೆ ನಡೆಸಿ, ಆಯಾ ಪ್ರದೇಶ, ವಾತಾವರಣಕ್ಕೆ ಸೂಕ್ತವಾದ ಗಿಡಗಳನ್ನು ವಿತರಿಸಲಾಗುವುದು. 12 ಅಡಿ ಎತ್ತರದ ಹಲಸು, ಮಾವು, ನೇರಳೆ, ಆಲ, ಅತ್ತಿ, ಅರಳಿ, ಗೋಣಿ, ಬಸರಿ, ಆಮೆಹಣ್ಣು, ಸಂಪಿಗೆ, ಕಕ್ಕೆ, ಆವಲಂಡ, ರೋಸಿಯಾ, ಸೀತ ಅಶೋಕ, ಆಕಾಶ ಮಲ್ಲಿಗೆ, ಟೆಕೂಮ, ಹೊನ್ನೆ, ಬೀಟೆ, ಕದಂಬ, ತಾರೆ, ಮದ್ದಾಲೆ, ಹೆತ್ತೇಗ, ಎಬೋನಿ, ಬಿಳಿ ಸಿಡಾರ್, ಸುರಹೊನ್ನೆ, ನಾಗಸಂಪಿಗೆ, ನಾಗಲಿಂಗಪುಷ್ಪ, ಹೊಳೆಹೊನ್ನೆ ಸೇರಿದಂತೆ ಸುಮಾರು 50 ವಿವಿಧ ಜಾತಿಯ ಅಪರೂಪದ ಗಿಡಗಳು ಹಾಗೂ ಆರೇಳು ಅಡಿ ಎತ್ತರದ ವಿಭಿನ್ನ ಜಾತಿಯ ಸಸಿಗಳನ್ನೂ ನೆಡಲಾಗುವುದು ಎಂದು ತಿಳಿಸಿದರು.

ರೈತರಿಗೆ ಪೆÇ್ರೀತ್ಸಾಹ ಧನ: ಆಯ್ದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗಿಡ ನೆಡಲಾಗುವುದು. ಹಂತ ಹಂತವಾಗಿ ರೈತರ ಜಮೀನು ಹಾಗೂ ಮನೆಯ ಅಂಗಳದಲ್ಲಿ ಗಿಡ ಮರಗಳನ್ನು ನೆಡಲು ಉತ್ತೇಜಿಸಲಾಗುವುದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ನೀಡಲಾಗುವ ಸಸಿಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು, ಬೆಳೆಸುವ ರೈತರಿಗೆ 3 ವರ್ಷಗಳವರೆಗೆ ಪ್ರೋತ್ಸಾಹ ಧನ ನೀಡಲಾಗುವುದು. ಪ್ರತಿ ಸಸಿಗೆ ಮೊದಲೆರಡು ವರ್ಷ 30 ರೂ. ಹಾಗೂ ಮೂರನೇ ವರ್ಷ 40 ರೂ. ಸೇರಿ ಒಟ್ಟು 100 ರೂ.ಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಪರಿಸರಕ್ಕೆ ಪೂರಕವಾದ ತೇಗ, ಸಿಲ್ವರ್, ಹೆಬ್ಬೇವು, ನೇರಳೆ, ಅರಳಿ, ಶಿವನೆ ಸಸಿಗಳನ್ನು ರೈತರಿಗೆ ನೀಡುತ್ತಿದ್ದು, ಈ ವರ್ಷದಿಂದ ಶ್ರೀಗಂಧ ಸಸಿಗಳನ್ನೂ ವಿತರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2018-9ನೇ ಸಾಲಿನಲ್ಲಿ ಈವರೆಗೆ 22.215 ಲಕ್ಷ ಗಿಡಗಳನ್ನು ನೆಡಲಾಗಿದೆ. ಜತೆಗೆ 17.186 ಲಕ್ಷ ಗಿಡಗಳನ್ನು ಸಾರ್ವಜನಿಕರಿಗೆ ಮತ್ತು ರೈತರಿಗೆ ವಿತರಿಸಿದ್ದು, ಮೈಸೂರಿನ ಹೊರ ವರ್ತುಲ ರಸ್ತೆ ಒಳಗೊಂಡಂತೆ ಪ್ರಮುಖ ರಸ್ತೆ ಮತ್ತು ವಿವಿಧ ಬಡಾವಣೆಗಳಲ್ಲಿ 43 ಸಾವಿರ ಸೇರಿದಂತೆ ಮೈಸೂರು ಭಾಗದಲ್ಲಿ ಒಟ್ಟು 72 ಸಾವಿರ ಹಣ್ಣು, ಹೂವು ಮತ್ತು ನೆರಳು ನೀಡುವಂತಹ ಗಿಡಗಳನ್ನು ನೆಡಲಾಗಿದೆ ಎಂದು ಇದೇ ವೇಳೆ ಅವರು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಾಮಾಜಿಕ ಅರಣ್ಯ ವಿಭಾಗದ ಕೆ.ಎಂ.ಚಂದ್ರಶೇಖರ್ ಹಾಗೂ ವನ್ಯಜೀವಿ ವಿಭಾಗದ ಸಿದ್ದರಾಮಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

Translate »