ಇಬ್ಬರು ಖದೀಮರು ಕದ್ದಿದ್ದು ಬರೋಬರಿ 40 ಬೈಕ್‍ಗಳು! ಇವುಗಳ ಮೌಲ್ಯ 16 ಲಕ್ಷ ರೂ.
ಮೈಸೂರು

ಇಬ್ಬರು ಖದೀಮರು ಕದ್ದಿದ್ದು ಬರೋಬರಿ 40 ಬೈಕ್‍ಗಳು! ಇವುಗಳ ಮೌಲ್ಯ 16 ಲಕ್ಷ ರೂ.

August 14, 2018

ಮೈಸೂರು: ವಿವಿಧ ಠಾಣಾ ವ್ಯಾಪ್ತಿಯಲ್ಲಿ 16 ಲಕ್ಷ ರೂ., ಮೌಲ್ಯದ 40 ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಕೂರ್ಗಳ್ಳಿ ಗ್ರಾಮದ ಶ್ರೀನಿವಾಸ ಅಲಿಯಾಸ್ ಸೀನಿ ಅಲಿಯಾಸ್ ಬಂಕ್(30), ಈತ ಮೂಲತಃ ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಹೋಬಳಿಯ ಕಂಚಿನಕೆರೆ ಗ್ರಾಮ ನಿವಾಸಿ. ಕೂರ್ಗಳ್ಳಿಯ ದಿನೇಶ ಅಲಿಯಾಸ್ ದಿನಿ ಅಲಿಯಾಸ್ ಗೆಂಡೆ(25), ಈತ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಮಳ್ಳಿ ಗ್ರಾಮದ ನಿವಾಸಿಯಾಗಿದ್ದು, ಇದೀಗ ಇವರಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ದ್ವಿ ಚಕ್ರ ವಾಹನಗಳ ಕಳ್ಳತನ ಪದೇ ಪದೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು, ಆಯಾಯ ಠಾಣಾ ತನಿಖಾಧಿಕಾರಿಗಳಿಗೆ ಖದೀಮರ ಬೇಟೆಗೆ ಖಡಕ್ ಸೂಚನೆ ನೀಡಿದ್ದರು. ಆ.7 ರಂದು ಕಾರ್ಯಾಚರಣೆ ಕೈಗೊಂಡ ವಿಜಯನಗರ ಪೊಲೀಸರು, ಹೂಟಗಳ್ಳಿಯ ಕೆಆರ್‍ಎಸ್ ರಸ್ತೆಯ ಹೋಟೆಲ್ ಸೈಲೆಂಟ್ ಷೋರ್ಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಹೀರೋ ಹೊಂಡಾ ಸ್ಲ್ಪೆಂಡರ್ ಪ್ಲಸ್ ಬೈಕಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಖದೀಮರನ್ನು ತಡೆದು ವಿಚಾರಣೆ ನಡೆಸಿದಾಗ ವಿವಿಧ ಠಾಣಾ ವ್ಯಾಪ್ತಿಯಲ್ಲಿ 40 ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳು, 2015ರಿಂದಲೂ ಮೈಸೂರು ನಗರ, ಕೆ.ಆರ್. ನಗರ, ಕೆ.ಅರ್.ಪೇಟೆ, ಮಂಡ್ಯ, ಬೆಳ್ಳೂರು ಸೇರಿದಂತೆ ಇತರೆ ಸ್ಥಳಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರ ಮಾಹಿತಿ ಮೇರೆಗೆ ಹೀರೋ ಹೊಂಡಾ ಸ್ಲ್ಪೆಂಡರ್ ಪ್ಲಸ್-22, ಹೀರೋ ಹೊಂಡಾ ಫ್ಯಾಷನ್ ಪ್ಲಸ್-8, ಫ್ಯಾಷನ್ ಪ್ರೋ-8, ಬಜಾಜ್ ಪಲ್ಸರ್-1, ಬಜಾಜ್ ಪ್ಲಾಟೀನಾ-1 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಇದರಿಂದಾಗಿ ವಿಜಯನಗರ ಠಾಣೆಯ-15, ಹೆಬ್ಬಾಳು-5, ಮೇಟಗಳ್ಳಿ-1, ವಿವಿ ಪುರಂ-1, ದೇವರಾಜ-1, ಸರಸ್ವತಿಪುರಂ-1, ಕೆ.ಆರ್.ನಗರ-7, ಇಲವಾಲ-1, ಮಂಡ್ಯ ಪಶ್ಚಿಮ ಠಾಣೆ-2, ಮಂಡ್ಯ ಸೆಂಟ್ರಲ್ ಠಾಣೆ-1, ಕೆ.ಆರ್.ಪೇಟೆ ಗ್ರಾಮಾಂತರ-1, ಶ್ರೀರಂಗಪಟ್ಟಣ-1, ಪಾಂಡವಪುರ-1, ಅರಕೆರೆ-1, ಬೆಳ್ಳೂರು-1 ಠಾಣಾ ವ್ಯಾಪ್ತಿಯ ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

Translate »