ಮಹಿಳೆಯರು ಸ್ವಯಂ ಉದ್ಯೋಗದ  ಮೂಲಕ ಆದಾಯ ಗಳಿಸಲು ಸಲಹೆ
ಮೈಸೂರು

ಮಹಿಳೆಯರು ಸ್ವಯಂ ಉದ್ಯೋಗದ  ಮೂಲಕ ಆದಾಯ ಗಳಿಸಲು ಸಲಹೆ

August 14, 2018

ಮೈಸೂರು:  ಎಲ್ಲರಿಗೂ ಸರ್ಕಾರಿ ಉದ್ಯೋಗ ಲಭಿಸದ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ಉದ್ಯೋಗ ಮಾಡುವ ಮೂಲಕ ಆದಾಯ ಗಳಿಸುವತ್ತ ಗಮನ ಹರಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೆ.ರಾಧ ಸಲಹೆ ನೀಡಿದರು.

ಮೈಸೂರಿನ ವಿಜಯನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಎಸ್.ಎಸ್. ಟ್ರಸ್ಟ್ ಮತ್ತು ಮೈಸೂರು ಜಿಲ್ಲಾ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಹಿಳೆಯರಿಗಾಗಿ ಆಯೋಜಿಸಿದ್ದ ಮೂರು ದಿನಗಳ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ ಬಹುತೇಕ ಮಂದಿ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳೇ ಆಗಿರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಿ ಉದ್ಯೋಗದ ಮೇಲಿನ ವ್ಯಾಮೋಹ ಬಿಟ್ಟು ಸ್ವಯಂ ಉದ್ಯೋಗ ಮಾಡುವತ್ತ ಗಮನ ಕೇಂದ್ರೀಕರಿಸಬೇಕು. ಸ್ವಯಂ ಉದ್ಯೋಗ ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಮನೆಯಲ್ಲಿಯೇ ಬಿಡುವಿನ ವೇಳೆ ಸ್ವಯಂ ಉದ್ಯೋಗ ಮಾಡುವುದಕ್ಕೆ ವಿಫುಲವಾದ ಅವಕಾಶವಿದೆ. ಇದಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಸರ್ಕಾರದ ವತಿಯಿಂದ ರಿಯಾಯಿತಿಯ ಸೌಲಭ್ಯವೂ ದೊರೆಯಲಿದೆ. ಮನೆಯಲ್ಲಿಯೇ ಇದ್ದು ದಿನಕ್ಕೆ 300 ರೂ ನಿಂದ 500 ರೂ.ವರೆಗೆ ಸಂಪಾದಿಸಬಹುದಾಗಿದೆ. ಸ್ವಯಂ ಉದ್ಯೋಗದಲ್ಲಿ ತಯಾರಿಸಿದ ವಸ್ತುಗಳಿಗೆ ಉತ್ತಮ ಮಾರುಕಟ್ಟೆಯ ಸೌಲಭ್ಯವೂ ಲಭ್ಯವಾಗುವುದರಿಂದ ಮಹಿಳೆಯರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಇದರೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವು ಮೇಳ ಮತ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತದೆ. ಇದರಲ್ಲಿಯೂ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ತರಬೇತಿ ಶಿಬಿರದಲ್ಲಿ ಕಂಪ್ಯೂಟರ್ ತರಬೇತಿ, ವಾಹನ ಚಾಲನಾ ತರಬೇತಿ, ಎಂಬ್ರಾಡರಿ, ಫ್ಯಾಷನ್ ಡಿಸೈನ್, ಕೃತಕ ಆಭರಣ ತಯಾರಿಕೆ ಸೇರಿದಂತೆ ಒಟ್ಟು 30 ಬಗೆಯ ತರಬೇತಿ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಎಸ್‍ಎಸ್ ಟ್ರಸ್ಟ್ ಮುಖ್ಯಸ್ಥೆ ರೇಖಾ, ಮಹಿಳಾ ಒಕ್ಕೂಟ ಅಧ್ಯಕ್ಷೆ ಪ್ರೇಮಕುಮಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮದ ಮೇಲ್ವಿಚಾರಕರಾದ ವಿದ್ಯಾವತಿ, ಕೃಷ್ಣಕುಮಾರಿ, ಸಹನ, ರಾಧಮಣಿ, ರೇಖಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

 

Translate »