ಇನ್ನು 15 ದಿನದಲ್ಲಿ ಬಾಕಿ ಮನೆಗಳಿಗೆ ಜಸ್ಕೋ ನೀರಿನ ಸಂಪರ್ಕ ಕಲ್ಪಿಸಲು ಶಾಸಕ ರಾಮದಾಸ್ ತಾಕೀತು
ಮೈಸೂರು

ಇನ್ನು 15 ದಿನದಲ್ಲಿ ಬಾಕಿ ಮನೆಗಳಿಗೆ ಜಸ್ಕೋ ನೀರಿನ ಸಂಪರ್ಕ ಕಲ್ಪಿಸಲು ಶಾಸಕ ರಾಮದಾಸ್ ತಾಕೀತು

August 4, 2018

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಮರುವಿಂಗಡಿತ 55ನೇ ವಾರ್ಡ್‍ನಲ್ಲಿ ಪಾದಯಾತ್ರೆ ನಡೆಸಿ, ಸಮಸ್ಯೆ ಆಲಿಸಿದ ಶಾಸಕ ಎಸ್.ಎ.ರಾಮದಾಸ್ ಅವರು, ಇನ್ನು 15 ದಿನಗಳಲ್ಲಿ ಜಸ್ಕೋ ಬಾಕಿ ಉಳಿಸಿರುವ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವುದರೊಂದಿಗೆ, ಪೈಪ್‍ಲೈನ್‍ಗಾಗಿ ಅಗೆದಿರುವ ರಸ್ತೆಗಳಿಗೆ ಡಾಂಬರು ಹಾಕಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ನರ್ಮ್ ಯೋಜನೆಯಡಿ 24×7 ಕುಡಿಯುವ ನೀರು ಸರಬರಾಜು ಕಾಮಗಾರಿ ನಡೆಸಿದ ಜಸ್ಕೋ ಸಂಸ್ಥೆ, ಅನೇಕ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಎಲ್ಲಾ ಮನೆಗಳಿಗೂ ಸಂಪರ್ಕ ಕಲ್ಪಿಸಬೇಕು. ಅಲ್ಲದೆ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಗೆಯೇ ಬಿಟ್ಟಿರುವ ಕಡೆಗಳಿಗೆ ಡಾಂಬರೀಕರಣ ಮಾಡಬೇಕು. ಅನಿಯಮಿತ ನೀರು ಸರಬರಾಜಿನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪ್ರತಿನಿತ್ಯ ಬೆಳಿಗ್ಗೆ ನಿಗಧಿತ ಅವಧಿಯಲ್ಲೇ ನೀರು ಪೂರೈಕೆ ಮಾಡಬೇಕು.

ಬಂಡಿಕೇರಿ, ಮೇದರಕೇರಿ ಸೇರಿದಂತೆ ಹಲವೆಡೆ ಮಳೆ ನೀರು ಚರಂಡಿ ಸಮಸ್ಯೆ ವಿಪರೀತವಾಗಿದ್ದು, ರಸ್ತೆಯಲ್ಲೇ ನೀರು ನಿಲ್ಲುತ್ತಿದೆ. ಚರಂಡಿಯಲ್ಲಿರುವ ಹೂಳನ್ನು ತೆರವುಗೊಳಿಸಿ, ಅಗತ್ಯವಿರುವ ಕಡೆ ಎಲ್ ಹಾಗೂ ಯು ಆಕಾರದಲ್ಲಿ ವೈಜ್ಞಾನಿಕವಾಗಿ ಮಳೆ ನೀರಿನ ಚರಂಡಿ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಂಡಿಕೇರಿ ಹಾಗೂ ಮೇದರಕೇರಿಯಲ್ಲಿ ಮನೆಗಳಿಗೆ ನೀರಿನ ಸಂಪರ್ಕವಿದ್ದು, ಸಾರ್ವಜನಿಕ ಸ್ಥಳದಲ್ಲಿರುವ ನಲ್ಲಿಗಳನ್ನು ಅಸಮರ್ಪಕವಾಗಿ ಬಳಸಿಕೊಳ್ಳುತ್ತಿರುವುದರಿಂದ ನೀರು ಪೋಲಾಗುತ್ತಿದೆ. ಈ ಬಗ್ಗೆ ನಿಗಾ ವಹಿಸಿ ಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿರುವ ನಲ್ಲಿಗಳನ್ನು ತೆರವುಗೊಳಿಸಬೇಕು. ಬಿಡಾಡಿ ರಾಸುಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ಕಸದ ರಾಶಿಯೆಲ್ಲಾ ರಸ್ತೆಗೆಲ್ಲಾ ಚೆಲ್ಲಾಡಿ, ಅಶುಚಿತ್ವ ತಾಂಡವವಾಡುತ್ತಿದೆ ಎಂದು ಸಾರ್ವಜನಿಕರು ಹಲವು ದಿನಗಳಿಂದ ದೂರುತ್ತಿದ್ದಾರೆ. ಆದ್ದರಿಂದ ರಾಸುಗಳನ್ನು ತಮ್ಮ ಮನೆಯ ವ್ಯಾಪ್ತಿಯಲ್ಲೇ ಕಟ್ಟಿಹಾಕಿ ನೋಡಿಕೊಳ್ಳುವಂತೆ ಮಾಲೀಕರಿಗೆ ಸೂಚನೆ ನೀಡಿ. ಆದರೂ ರಸ್ತೆಗೆ ಬಿಟ್ಟರೆ ಆ ರಾಸುಗಳನ್ನು ಹಿಡಿದು ಪಿಂಜರಾಪೋಲ್‍ಗೆ ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚಾಮುಂಡಿಪುರಂ, ವಿದ್ಯಾರಣ್ಯಪುರಂ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಚಾಮುಂಡಿಪುರಂ ವೃತ್ತ, ಅಂದಾನಿ ವೃತ್ತ, ನಂಜುಮಳಿಗೆ ಹಾಗೂ ಟಿ.ವಿ.ಶ್ರೀನಿವಾಸ್‍ರಾವ್ ವೃತ್ತ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡುವ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ನಿವಾಸಿಗಳಿಗೆ ಭರವಸೆ ನೀಡಿದರು.

ಸಾರ್ವಜನಿಕ ಸೇವೆಗಾಗಿ ಬಿಟ್ಟಿರುವ ಗಲ್ಲಿಗಳನ್ನೂ ಅತಿಕ್ರಮಿಸಿಕೊಂಡು ನಿರ್ಮಾಣ ಮಾಡಿರುವ ಮನೆಗಳು, ಕಾಪೌಂಡ್‍ಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಚಾಮುಂಡಿಪುರಂನ ಖಾಸಗಿ ನಿವೇಶನದಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಮೊಬೈಲ್ ಟವರ್‍ನಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು ಅದನ್ನು ತೆರವುಗೊಳಿಸಬೇಕು.

ಬಸವೇಶ್ವರ ರಸ್ತೆಯಲ್ಲಿರುವ ಮೈದಾನಕ್ಕೆ ನಗರ ಪಾಲಿಕೆಯಿಂದ ಕಾಂಪೌಂಡ್ ಹಾಕಲಾಗಿದ್ದರೂ ಒಳಭಾಗಕ್ಕೆ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಕಾಪೌಂಡ್ ಎತ್ತರಿಸುವುದರೊಂದಿಗೆ ಸುತ್ತಲೂ ಇರುವ ಗೇಟ್‍ಗಳನ್ನು ಮುಚ್ಚಿ, ಹೊಸದಾಗಿ ಭದ್ರವಾದ ಒಂದೇ ಒಂದು ಗೇಟ್ ಅಳವಡಿಸಬೇಕು. ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಹೊಸದಾದ ಕಂಬಗಳನ್ನು ಅಳವಡಿಸಬೇಕು. ಬೀದಿ ದೀಪ ನಿರ್ವಹಣೆ ಬಗ್ಗೆ ಅಧಿಕಾರಿಗಳೇ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಬೇಕು. ಅಂದಾನಿ ವೃತ್ತದಲ್ಲಿ ಹೈಮಾಸ್ಟ್ ದೀಪ ಅಳವಡಿಸಿ, ಇಲ್ಲಿಗೆ ಸಂಪರ್ಕಿಸುವ ರಸ್ತೆಗಳ ಅಗಲೀಕರಣಕ್ಕೆ ಸೂಚಿಸಿದ ರಾಮದಾಸ್ ಅವರು, ಸಾರ್ವಜನಿಕರ ಒತ್ತಾಯದ ಮೇರೆಗೆ ಅಕ್ಕಮ್ಮಣ್ಣಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸುವುದರೊಂದಿಗೆ ಪಕ್ಕದ ಜಾಗದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

Translate »