ಮೈಸೂರಲ್ಲಿ ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ ಉತ್ಸವ: ದೇವಿಗೆ ಪೂಜೆ ಸಲ್ಲಿಸಿ ವಿವಿಧ ರೀತಿಯ ಪ್ರಸಾದ ವಿನಿಯೋಗ
ಮೈಸೂರು

ಮೈಸೂರಲ್ಲಿ ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ ಉತ್ಸವ: ದೇವಿಗೆ ಪೂಜೆ ಸಲ್ಲಿಸಿ ವಿವಿಧ ರೀತಿಯ ಪ್ರಸಾದ ವಿನಿಯೋಗ

August 4, 2018

ಮೈಸೂರು:  ಮೈಸೂರಿನಲ್ಲಿ ಇಂದು ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಸಂಭ್ರಮ ಮನೆಮಾಡಿತ್ತು. ನಗರದ ವಿವಿಧೆಡೆ ದೇವಾಲಯಗಳು, ರಸ್ತೆ, ವೃತ್ತಗಳು ಮತ್ತು ಆಟೋ ನಿಲ್ದಾಣಗಳಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ವರ್ಧಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ವಿವಿಧ ಆಟೋ ಚಾಲಕರ ಸಂಘಗಳು, ಸೇವಾ ಸಂಸ್ಥೆಗಳು ನಗರದ ಪ್ರಮುಖ ವೃತ್ತಗಳಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನರಿಗೆ ಪೂಜೆ ಸಲ್ಲಿಸಿ, ಪಲಾವ್, ಕೇಸರಿಬಾತ್, ಲಡ್ಡು, ಜಹಾಂಗೀರ್ ಮತ್ತಿತರೆ ತಿಂಡಿಗಳನ್ನು ಭಕ್ತರಿಗೆ ವಿತರಿಸುವ ಮೂಲಕ ವರ್ಧಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈ ವೇಳೆ ನೂರಾರು ಮಂದಿ ಭಕ್ತರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದರ್ಶನ ಪಡೆದು ಪುಳಕಿತರಾದರು.

ಯಾವ್ಯಾವ ಸಂಸ್ಥೆಗಳಿಂದ ಅನ್ನಸಂತರ್ಪಣೆ: ವಿನೋಬಾ ರಸ್ತೆಯ ಹೋಟೆಲ್ ಶೃಂಗಾರ್ ಸಮೀಪದಲ್ಲಿ ಕಟ್ಟೆ ಬಳಗವು ಮೈವಿವಿ ಪ್ರಾಧ್ಯಾಪಕ ಶ್ರೀನಾಥ್‍ರವರ ನೇತೃತ್ವದಲ್ಲಿ ಪಲಾವ್, ಕೇಸರಿಬಾತ್ ವಿತರಿಸಿತು. ಹಾಗೆಯೇ ವಿನಾಯಕನಗರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಸಿಂಹಾದ್ರಿ, ಶ್ರೀ ಮಹದೇಶ್ವರ, ಶ್ರೀ ವಿನಾಯಕ, ಡಿ.ಬನುಮಯ್ಯ ವೃತ್ತ ಮತ್ತು ಜಯಲಕ್ಷ್ಮೀಪುರಂನ ಶ್ರೀ ಚಾಮುಂಡೇಶ್ವರಿ ಆಟೋ ಚಾಲಕರು ಆಟೋ ನಿಲ್ದಾಣಗಳಲ್ಲಿ ಚಾಮುಂಡೇಶ್ವರಿ ಆಮ್ಮನವರಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿದರು.

ವಿನಾಯಕನಗರದ ವಿನಾಯಕ ಗೆಳೆಯರ ಬಳಗ, ದಳವಾಯಿ ಆಟೋ ಮಾಲೀಕರು ಮತ್ತು ಚಾಲಕರ ಸಂಘ, ಸರ್.ಎಂ.ವಿಶ್ವೇಶ್ವರಯ್ಯ ಯುವಕರ ಸಂಘ ಹಾಗೂ ವಿಜಯನಗರ 2ನೇ ಹಂತದಲ್ಲಿ ಅಜಯ್ ಕುಮಾರ್ ನೇತೃತ್ವದಲ್ಲಿ ಭಕ್ತರಿಗೆ ಕೇಸರಿಬಾತು, ಪಲಾವ್ ವಿತರಿಸಲಾಯಿತು.

ಜತೆಗೆ ಸೂರ್ಯಬೇಕರಿ ವೃತ್ತದಲ್ಲಿ ಸ್ನೇಹ ಬಳಗ, ಹೆಬ್ಬಾಳ್‍ನ ಶ್ರೀ ಚಾಮುಂಡೇಶ್ವರಿ ಬ್ಯಾಟರಿ ಪಾಯಿಂಟ್, ಶ್ರೀ ಭೈರವೇಶ್ವರ ಟಿ ಸ್ಟಾಲ್ ಹಾಗೂ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಸಹಯೋಗದೊಂದಿಗೆ ಶೃತಿ ಸೆರಾಮಿಕ್ಸ್ ಮತ್ತು ಶ್ರೀ ಕಾಲಬೈರವೇಶ್ವರ ಆಟೋ ಸಂಘ ಸದಸ್ಯರು ಹೆಬ್ಬಾಳ್‍ನ ಎಂಜಿ.ಕೊಪ್ಪಲು ರಸ್ತೆಯಲ್ಲಿ ಉಪ್ಪಿಟ್ಟು, ಕೇಸರಿಬಾತ್, ಪಲಾವ್ ವಿತರಿಸಿದರು.
ರಾಜಸ್ತಾನಿಯ ದೈವಭಕ್ತಿ: ರಾಜಸ್ಥಾನ ಮೂಲದ ಮಹೇಶ್ ಎಂಬುವರು ವಿನಾಯಕನಗರದಲ್ಲಿ ಟಿ ಸ್ಟಾಲ್ ನಡೆಸುತ್ತಿದ್ದು, ವರ್ಧಂತಿ ಹಿನ್ನೆಲೆಯಲ್ಲಿ ಭಕ್ತರಿಗೆ ಪಲಾವ್ ವಿತರಿಸಿದರು. ನಾನು ಸ್ಥಳಿಯ ನಿವಾಸಿಯಲ್ಲದಿದ್ದರೂ ಅಮ್ಮನ ಮೇಲಿನ ಭಕ್ತಿಯಿಂದ ಈ ಕಾರ್ಯವನ್ನು ಮಾಡುತ್ತಿದ್ದೇನೆ ಎಂದರು.

Translate »