ದಸರಾ ಉದ್ಘಾಟನಾ ಕಾರ್ಯಕ್ರಮ 200 ಮಂದಿಗೆ ಸೀಮಿತ
ಮೈಸೂರು

ದಸರಾ ಉದ್ಘಾಟನಾ ಕಾರ್ಯಕ್ರಮ 200 ಮಂದಿಗೆ ಸೀಮಿತ

September 23, 2020

ಮೈಸೂರು,ಸೆ.22(ಆರ್‍ಕೆ)-ಈ ಬಾರಿ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರತಿನಿಧಿ ಗಳನ್ನು ಹೊರತುಪಡಿಸಿ 200 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಚಾಮುಂಡಿಬೆಟ್ಟದಲ್ಲಿ ನವ ರಾತ್ರಿ ಉತ್ಸವಕ್ಕೆ ಚಾಲನೆ ನೀಡುವ ಕಾರ್ಯ ಕ್ರಮಕ್ಕೆ ವೇದಿಕೆ ಸಿದ್ಧಪಡಿಸುವ ಸಲುವಾಗಿ ಇಂದು ಸಂಜೆ 4.30 ಗಂಟೆ ವೇಳೆಗೆ ಜಿಲ್ಲಾ ಧಿಕಾರಿ ಬಿ.ಶರತ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಎ.ಎನ್.ಪ್ರಕಾಶ್‍ಗೌಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಯಲ್ಲಿ ಈ ಬಾರಿ ಸರಳ ಹಾಗೂ ಸಾಂಪ್ರ ದಾಯಿಕವಾಗಿ ನಾಡಹಬ್ಬ ದಸರಾ ಮಹೋ ತ್ಸವ ಆಚರಿಸಲು ನಿರ್ಧರಿಸಿರುವುದರಿಂದ ಅಧಿದೇವತೆ ತಾಯಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡುವ ಸಮಾರಂಭಕ್ಕೆ 200 ಮಂದಿ ಗಿಂತ ಹೆಚ್ಚಿಗೆ ಆಹ್ವಾನಿತರು ಆಗಮಿಸದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳು ಅಧೀನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಾಮೂಲಿಯಂತೆ ದೇವಸ್ಥಾನದ ಪಕ್ಕ ದಲ್ಲೇ ವೇದಿಕೆ ನಿರ್ಮಿಸಿ 200 ಆಸನಗಳಿಗೆ ಮೀರದಂತೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡ ಬೇಕು, ದಸರಾ ಉದ್ಘಾಟಕರು, ಮುಖ್ಯಮಂತ್ರಿ, ಸಚಿವರು, ಸ್ಥಳೀಯ ಜನಪ್ರತಿನಿಧಿಗಳಿಗೆ ವೇದಿಕೆಯಲ್ಲಿ ಆಸನ ವ್ಯವಸ್ಥೆ ಮಾಡುವುದು, ಆಹ್ವಾನಿತರಲ್ಲದ ಸಾರ್ವಜನಿಕರು ಅಂದು ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಬರದಂತೆ ನಿರ್ಬಂಧಿಸುವುದು,

ಭದ್ರತಾ ಕ್ರಮ, ವಾಹನ ನಿಲುಗಡೆ, ಸಂಚಾರಕ್ಕೆ ಆಗದಂತೆ ನೋಡಿಕೊಳ್ಳುವುದೂ ಸೇರಿದಂತೆ ದಸರಾ ಉದ್ಥಾಟನೆಗೆ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮದ ಬಗ್ಗೆ ಡಿಸಿ ಶರತ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟರಾಜು, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್. ಯತಿರಾಜ್ ಸಂಪತ್‍ಕುಮಾರನ್, ಸಂಚಾರ ವಿಭಾಗದ ಎಸಿಪಿ ಸಂದೇಶ್‍ಕುಮಾರ್, ಕೆ.ಆರ್. ಉಪ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಕೆ.ಆರ್. ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.