ಕೃಷಿ ಮಸೂದೆಗಳ ವಿರೋಧಿಸಿ ಸೆ.25ರ ಬಂದ್ ಗೊಂದಲ
ಮೈಸೂರು

ಕೃಷಿ ಮಸೂದೆಗಳ ವಿರೋಧಿಸಿ ಸೆ.25ರ ಬಂದ್ ಗೊಂದಲ

September 23, 2020

ಬೆಂಗಳೂರು, ಸೆ.22-ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಮಸೂದೆಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಕರೆ ನೀಡಿರುವ ಭಾರತ್ ಬಂದ್‍ಗೆ ಬೆಂಬಲ ನೀಡುವ ವಿಚಾರದಲ್ಲಿ ರಾಜ್ಯ ರೈತ ಸಂಘಟನೆಗಳ ನಡುವೆ ಒಮ್ಮತ ಮೂಡದೇ ಸೆ.25ರ ಕರ್ನಾಟಕ ಬಂದ್ ನಡೆಯುವುದೋ-ಇಲ್ಲವೋ ಎಂಬುದರ ಬಗ್ಗೆ ಗೊಂದಲ ಮೂಡಿದೆ.

ಈಗಾಗಲೇ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಗಳಿಗೆ ಅಂಗೀಕಾರ ದೊರೆತಿದೆ. ರಾಜ್ಯ ವಿಧಾನ ಮಂಡಲ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಈ ಅಧಿವೇಶನದಲ್ಲಿ ಸರ್ಕಾರ ಕೃಷಿ ಮಸೂದೆಗಳನ್ನು ಮಂಡಿಸಿ, ಅದಕ್ಕೆ ಅಂಗೀಕಾರ ಪಡೆಯಲು ಮುಂದಾ ಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂ ದಲೇ ಸಾವಿರಾರು ರೈತರು ಫ್ರೀಡಂ ಪಾರ್ಕ್ ನಲ್ಲಿ ಜಮಾಯಿಸಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಅಧಿವೇಶನ ಮುಗಿಯಲಿ ರುವ ಸೆ.26ರವರೆಗೆ ಅಹೋರಾತ್ರಿ ಧರಣಿ ನಡೆಯಲಿದೆ ಎಂದು ಯಾವುದೇ ರೀತಿಯ ಗೊಂದಲಗಳಿಲ್ಲದೇ ರೈತ ಸಂಘಟನೆಗಳು ಘೋಷಿಸಿವೆ. ಆದರೆ ಸೆ.25ರಂದು ಕರ್ನಾ ಟಕ ಬಂದ್ ಬಗ್ಗೆ ರೈತ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಕರ್ನಾಟಕ ಬಂದ್ ಬಗ್ಗೆ ಇಂದು (ಮಂಗಳ ವಾರ) ನಿರ್ಧಾರ ಪ್ರಕಟಿಸುವುದಾಗಿ ಸೋಮ ವಾರ ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ತಿಳಿಸಿದ್ದರು. ವಿವಿಧ ಸಂಘಟನೆ ಗಳ ಜೊತೆ ಚರ್ಚೆ ನಡೆಸಿ ಬಂದ್ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದರಾದರೂ, ಇಂದು ರೈತ ಸಂಘಟನೆಗಳ ನಡುವೆ ಒಮ್ಮತ ಮೂಡಲಿಲ್ಲ. ಪ್ರತಿಯೊಂದು ಸಂಘಟ ನೆಯು ತನ್ನದೇ ಆದ ಅಭಿಪ್ರಾಯಕ್ಕೆ ಗಂಟು ಬಿದ್ದಿರುವುದರಿಂದ ಒಮ್ಮತ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು, ಐಕ್ಯತೆ ಯಿಂದ ಎಲ್ಲರೂ ಚರ್ಚೆ ನಡೆಸಿ ಸೆ.25ರಂದು ಕರ್ನಾಟಕ ಬಂದ್ ನಡೆಸುವ ಬಗ್ಗೆ ಬುಧ ವಾರ ಬೆಳಿಗ್ಗೆ ಅಂತಿಮ ನಿರ್ಧಾರ ಕೈಗೊಳ್ಳು ತ್ತೇವೆ ಎಂದು ಹೇಳಿದರೆ, ಕೋಡಿಹಳ್ಳಿ ಚಂದ್ರ ಶೇಖರ್, ಕರ್ನಾಟಕ ಬಂದ್ ಇಲ್ಲ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬಂದ್ ಮಾಡ ಲಾಗುತ್ತದೆ. ಸರ್ಕಾರ ಕೃಷಿ ಮಸೂದೆಗಳನ್ನು ಹಿಂಪಡೆಯದೇ ಇದ್ದರೆ ಬಂದ್‍ಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಹೇಳಿದ್ದಾರೆ. ಇನ್ನು ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್ ಅವರಂತೂ ನಮ್ಮದು ರಾಷ್ಟ್ರೀಯ ಸಂಘಟನೆಯಾಗಿದ್ದು, ಕೊರೊನಾದಿಂದ ಜನ ಈಗಾಗಲೇ ಸಾಕಷ್ಟು ಬಳಲಿದ್ದಾರೆ. ಆದ್ದರಿಂದ ಬಂದ್ ಬೇಡ ಎಂದು ಕೆಲ ಸಂಘಟನೆ ಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಹೋರಾಟದ ಚಿಂತನೆ ನಡೆದಿದೆ. ಬುಧವಾರ ಸಂಜೆ 4 ಗಂಟೆಗೆ ಸಭೆ ನಡೆಸಿ ಬಂದ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಮಧ್ಯೆ ಹುಬ್ಬಳ್ಳಿ ರೈತ ಸಂಘಟನೆಯು ಸೆ.25ರಂದು ಕರ್ನಾಟಕ ಬಂದ್ ನಡೆಯುತ್ತದೆ ಎಂದು ಘೋಷಿಸಿದೆ. ಒಟ್ಟಾರೆ ಕರ್ನಾಟಕ ಬಂದ್ ಬಗ್ಗೆ ರೈತ ಸಂಘಟನೆಗಳ ನಡುವೆಯೇ ಗೊಂದಲ ಮೂಡಿದೆ.

ರೈತ ಸಂಘಟನೆಗಳ ಕರ್ನಾಟಕ ಬಂದ್‍ಗೆ ಓಲಾ ಓಬರ್ ಚಾಲಕರ ಸಂಘಟನೆ, ಅಟೋ ಟ್ಯಾಕ್ಸಿ ಚಾಲಕರ ಸಂಘಟನೆ, ಲಾರಿ ಮಾಲೀಕರ ಸಂಘಟನೆ ಸೇರಿದಂತೆ 32 ಸಂಘಟನೆಗಳು ಬೆಂಬಲ ಸೂಚಿಸಿದ್ದರೆ, ಹೋಟೆಲ್ ಮಾಲೀಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಬಂದ್‍ನಲ್ಲಿ ಭಾಗವಹಿಸದೇ ರೈತರಿಗೆ ನೈತಿಕ ಬೆಂಬಲ ಘೋಷಿಸಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಫ್ರೀಡಂ ಪಾರ್ಕ್‍ಗೆ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ರೈತರ ಜೊತೆ ಮಾತುಕತೆ ನಡೆಸಲು ಆಗಮಿಸಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡರು. ಆನಂದರಾವ್ ವೃತ್ತದಲ್ಲಿ ಜಾಥಾ ನಡೆಸಿದ ರೈತರು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ರೈತ ಮುಖಂಡರು ತಮ್ಮ ಕಾರ್ಯಕರ್ತರ ಮನವೊಲಿಸಿ ಫ್ರೀಡಂ ಪಾರ್ಕ್‍ಗೆ ಕರೆತಂದರು. ಇಂದು ಸಂಜೆ ರೈತರ ನಿಯೋಗವೊಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಈ ವೇಳೆ ಮುಖ್ಯಮಂತ್ರಿ ಗಳು, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾಗಿರುವ ಕಬ್ಬಿನ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

Translate »