ಮೈಸೂರು,ಅ.14(ಆರ್‍ಕೆ)-ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ಅವರ ವರ್ಗಾವಣೆ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೇಂದ್ರೀಯ ಆಡಳಿತ ನ್ಯಾಯಾಧಿಕರಣ(ಅಂಖಿ)ವು ಮತ್ತೆ ಅಕ್ಟೋಬರ್ 16ಕ್ಕೆ ಮುಂದೂಡಿದೆ.
ಆನ್‍ಲೈನ್ ಮೂಲಕ ಇಂದು ಅರ್ಜಿ ಮೇಲಿನ ವಿಚಾರಣೆ ನಡೆಯಿ ತಾದರೂ, ಆ ವೇಳೆ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಹೇಳಿಕೆಗಳು ಸ್ಪಷ್ಟವಾಗಿ ಕೇಳಿಸದಿರುವುದರಿಂದ ನ್ಯಾಯಾಧೀಶರು ಮುಂದಿನ ವಿಚಾ ರಣೆಯನ್ನು ಶುಕ್ರವಾರ (ಅ.16)ಕ್ಕೆ ಮುಂದೂಡಿದ್ದು, ಅಂದು ಅರ್ಜಿದಾರ ಮತ್ತು ಪ್ರತಿವಾದಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.
ಕಲಬುರ್ಗಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಿ.ಶರತ್ ಅವರನ್ನು ಆಗಸ್ಟ್ 29ರಂದು ಮೈಸೂರು ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿದ್ದ ಸರ್ಕಾರ, ಕೇವಲ ಒಂದೇ ತಿಂಗಳೊಳಗಾಗಿ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿತ್ತು. ಅದರಿಂದ ಅಸಮಾಧಾನಗೊಂಡ ಶರತ್ ಅವರು, ಅವಧಿಗೂ ಮುನ್ನ ತಮ್ಮನ್ನು ವರ್ಗಾವಣೆ ಮಾಡಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 7ರಂದು ಆನ್‍ಲೈನ್‍ನಲ್ಲಿ ಅವರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಇಂದಿಗೆ (ಅ.14) ಮುಂದೂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.