ಚಾಮರಾಜನಗರ, ಏ.20- ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಪುರಾಣಿ ಪೋಡಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಸೋಮವಾರ ಭೇಟಿ ನೀಡಿ ಸೋಲಿಗರ ಕುಟುಂಬ ಗಳಿಗೆ ಪೌಷ್ಟಿಕ ಆಹಾರ ವಿತರಿಸಿ, ಅಹವಾಲು ಆಲಿಸಿದರು.
ಜಿಲ್ಲಾ ಎಸ್ಪಿ ಹೆಚ್.ಡಿ ಆನಂದಕುಮಾರ್ ಅವರೊಡನೆ ಪುರಾಣಿ ಪೋಡಿಗೆ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳು, ರಾಗಿ, ತೊಗರಿಬೇಳೆ, ಅಲಸಂದೆ, ಕಡ್ಲೇಕಾಳು, ಅಡುಗೆ ಎಣ್ಣೆ, ನಂದಿನಿ ತುಪ್ಪ, ಮೊಟ್ಟೆ ಸೇರಿದಂತೆ 1600 ರೂ. ಮೌಲ್ಯದ ವಿವಿಧ ಆಹಾರ, ದಿನಸಿ ಸಾಮಗ್ರಿಗಳನ್ನೊಳಗೊಂಡ ಪೌಷ್ಠಿಕ ಆಹಾರವನ್ನು ಪ್ರತಿ ಸೋಲಿಗ ಕುಟುಂಬಗಳಿಗೆ ವಿತರಿಸಿದರು.
ಮೂಲ ಆದಿವಾಸಿಗಳ ಆರೋಗ್ಯ ಬಲವರ್ಧನೆಗೆ ಜಿಲ್ಲೆಯ 146 ಹಾಡಿಗಳ 7,548 ಕುಟುಂಬಗಳಿಗೆ ಪೌಷ್ಟಿಕ ಆಹಾರವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸರ್ಕಾರ ನೀಡುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯಡಿ ಸೋಲಿಗರಿಗೆ ಕೆಲಸ ಒದಗಿಸುವಂತೆ ನಿರ್ದೇಶನ ನೀಡಿದ ಅವರು, ಅರಣ್ಯ ವ್ಯಾಪ್ತಿಯಲ್ಲೇ ಲಾಂಟಾನ ತೆರವು, ಕೆರೆ ಅಭಿವೃದ್ಧಿ ಮತ್ತಿತರ ಉದ್ಯೋಗ ಕೈಗೊಳ್ಳಲು ತುರ್ತಾಗಿ ಕ್ರಮ ವಹಿಸುವಂತೆ ಸೂಚಿಸಿದರು.
ಕಾಮಗಾರಿ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸೋಪು, ಸ್ಯಾನಿಟೈಸರ್‍ನಂತಹ ಸುರಕ್ಷತಾ ಸಾಧನಗಳು ಸಹ ಕಾಮಗಾರಿ ಸ್ಥಳದಲ್ಲಿಡಬೇಕು. ಪ್ರಸ್ತುತ ಸಂದರ್ಭ ನರೇಗಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸÀಬೇಕು ಎಂದರು.
ಕೋವಿಡ್-19 ವೈರಾಣು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ವೈಯಕ್ತಿಕ ಸ್ಚಚ್ಛತೆಗೆ ವಿಶೇಷ ಕಾಳಜಿ ವಹಿಸಬೇಕು. ಗುಂಪು ಸೇರುವುದನ್ನು ಬಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜ್ವರ, ಶೀತ, ಕೆಮ್ಮು, ನೆಗಡಿಯಂತಹ ಲಕ್ಷಣ ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಕೊಳ್ಳ ಬೇಕು. ಯಾವುದೇ ಸಮಸ್ಯೆಗಳು ತಲೆ ದೋರಿದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜಿಲ್ಲಾಡಳಿತ ನಿಮ್ಮ ನೆರವಿಗೆ ಹಾಗೂ ಆರೋಗ್ಯ ಸುರಕ್ಷತೆಗೆ ಸದಾ ಸ್ಪಂದಿಸಲು ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಅರಣ್ಯವಾಸಿಗಳಿಗೆ ಆತ್ಮಸ್ಥೈರ್ಯ ತುಂಬಿದರು. ಜಿಲ್ಲಾ ಎಸ್ಪಿ ಹೆಚ್.ಡಿ. ಆನಂದಕುಮಾರ್ ಮಾತನಾಡಿ, ಪ್ರತಿಯೊಬ್ಬರು ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಬೇಕು. ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ಮಾಹಿತಿ ನೀಡಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಉತ್ತೇಜನ ನೀಡಬಾರದು. ಪ್ರಸ್ತುತ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ ಎಂದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ತಹಶೀಲ್ದಾರ್ ಜೆ.ಮಹೇಶ್ ಇತರರಿದ್ದರು.