ಕನ್ನಡದಲ್ಲಿ ವ್ಯವಹರಿಸಲು ಅಂಗಡಿ ಮಾಲೀಕರಿಗೆ ಗಡುವು
ಮೈಸೂರು

ಕನ್ನಡದಲ್ಲಿ ವ್ಯವಹರಿಸಲು ಅಂಗಡಿ ಮಾಲೀಕರಿಗೆ ಗಡುವು

January 28, 2021

ಮೈಸೂರು, ಜ.27(ಎಸ್‍ಪಿಎನ್)- ಕನ್ನಡದಲ್ಲಿ ವ್ಯವಹರಿಸದ 30 ಅಂಗಡಿ ಮಾಲೀಕರಿಗೆ ಇನ್ನೊಂದು ತಿಂಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವಂತೆ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು ತಿಳುವಳಿಕೆ ನೋಟೀಸ್ ಜಾರಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ `ಕನ್ನಡ ಕಾಯಕ ವರ್ಷ’ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮೈಸೂರು ಪಾಲಿಕೆ ವಲಯ ಕಚೇರಿ-6ರ ವ್ಯಾಪ್ತಿಯ ದೇವರಾಜ ಅರಸು ರಸ್ತೆ, ಶಿವರಾಂಪೇಟೆ, ಕೊತ್ವಾಲ್ ರಾಮಯ್ಯ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳ ಅಂಗಡಿಗಳಿಗೆ ಗಣರಾಜ್ಯೋತ್ಸವ ಪ್ರಯುಕ್ತ ಕನ್ನಡ ಜಾಗೃತಿ ಸದಸ್ಯರು 30ಕ್ಕೂ ಹೆಚ್ಚು ಅಂಗಡಿಗಳಿಗೆ ಭೇಟಿ ನೀಡಿ ವರ್ತಕರಲ್ಲಿ ಕನ್ನಡ ಭಾಷೆ ಬಳಸುವಂತೆ ತಾಕೀತು ಮಾಡಿದ್ದಾರೆ.

ಸದಸ್ಯರು ಭೇಟಿ ನೀಡಿದ ಬಹುತೇಕ ಅಂಗಡಿಗಳಲ್ಲಿ ನಾಮಫಲಕ, ರಸೀದಿಗಳಲ್ಲಿ ಕನ್ನಡ ಬಳಕೆ ಇಲ್ಲದಿರುವುದು ಕಂಡು ಬಂದಿದ್ದು, ಎಲ್ಲಾ ಅಂಗಡಿ ಮಾಲೀಕರಿಗೆ ಶೇ.60ರಷ್ಟು ಕನ್ನಡ ಬಳಕೆ, ಗ್ರಾಹಕರಿಗೆ ನೀಡುವ ಬಿಲ್ಲಿನಲ್ಲಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ಹಾಗೂ ಮುಂದಿನ 30 ದಿನಗಳಲ್ಲಿ ಸಂಪೂರ್ಣ ಕನ್ನಡ ಭಾಷೆ ಬಳಸುವಂತೆ ತಿಳಿ ಹೇಳಿದ್ದಾರೆ.

ವಲಯ ಕಚೇರಿ 1ಕ್ಕೆ ಭೇಟಿ: ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಅನುಷ್ಠಾನ ಸಂಬಂಧ ಬುಧವಾರ ವಲಯ ಕಚೇರಿ 1ಕ್ಕೆ ಸಮಿತಿ ಸದಸ್ಯರು ಭೇಟಿ ನೀಡಿ, ಸಹಾಯಕ ಕಂದಾಯ ಅಧಿಕಾರಿ ಸುರೇಶ್‍ಕುಮಾರ್ ಅವರೊಂದಿಗೆ ಕಡತಗಳನ್ನು ಪರಿಶೀಲಿಸಲಾಯಿತು. ಈ ಸಂಧರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿರಾಜಣ್ಣ, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎ.ಎಸ್ ನಾಗರಾಜ್, ಅರವಿಂದ್ ಶರ್ಮ, ಸಾತನೂರು ದೇವರಾಜ್, ಎನ್.ಜಿ ಗಿರೀಶ್, ಡಾ.ಸೌಗಂಧಿಕಾ ವಿ.ಜೋಯಿಸ್ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಭೇರ್ಯಾ ರಾಮಕುಮಾರ್, ಮೈಸೂರು ಪಾಲಿಕೆ ವಲಯ ಕಚೇರಿ-6ರ ಕಂದಾಯ ಅಧಿಕಾರಿ ಆಶಾ, ಎಇಇ ಮೃತ್ಯುಂಜಯ, ಎಆರ್‍ಓ ಸಿದ್ದರಾಜು, ಆರೋಗ್ಯ ಪರಿವೀಕ್ಷಕಿ ರಾಜೇಶ್ವರಿ, ಯೋಗೇಂದ್ರ, ರೇಣುಕ ಮಂಜುಳ ಉಪಸ್ಥಿತರಿದ್ದರು.

Translate »