`ಕಾವಾ’ ಸಂಸ್ಥಾಪಕ ಡೀನ್ ಶೋಲಾಪುರ್‍ಕರ್ ಇನ್ನಿಲ್ಲ
ಮೈಸೂರು

`ಕಾವಾ’ ಸಂಸ್ಥಾಪಕ ಡೀನ್ ಶೋಲಾಪುರ್‍ಕರ್ ಇನ್ನಿಲ್ಲ

June 10, 2021

ಮೈಸೂರು, ಜೂ.9- ಮೈಸೂರಿನ ಪ್ರತಿಷ್ಠಿತ `ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ’ಯ (ಕಾವಾ) ಸಂಸ್ಥಾಪಕ ಡೀನ್, ಖ್ಯಾತ ಕಲಾವಿದ ಪ್ರೊ. ವಿಶ್ವ ನಾಥ್ ಎಂ.ಶೋಲಾಪುರ್‍ಕರ್ (90) ವಯೋಸಹಜ ಕಾರಣಗಳಿಂದಾಗಿ ನಗರದ ವಿವಿ ಮೊಹಲ್ಲಾದಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ ಕೊನೆ ಯುಸಿರೆಳೆದರು.

ಅವರು ಪತ್ನಿ ಸುಹಾಸಿನಿ, ಪುತ್ರಿಯ ರಾದ ಸುಚಿತ್ರ, ಸ್ವಾತಿ ಮತ್ತು ಪುತ್ರ ರವೀಂದ್ರ, ಸೊಸೆ ಸುನೇತ್ರ, ಮೊಮ್ಮಕ್ಕ ಳಾದ ಅಥರ್ವ, ಕಜ್ರಿ ಮತ್ತು ಅಪಾರ ಶಿಷ್ಯವೃಂದ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗೋಕುಲಂನಲ್ಲಿನ ಚಿರಶಾಂತಿಧಾಮ ದಲ್ಲಿ ನಿನ್ನೆಯೇ ನೆರವೇರಿತು.
ವ್ಯಕ್ತಿಚಿತ್ರ: 1931ರಲ್ಲಿ ವಿಜಯಪುರ ದಲ್ಲಿ (ಹಿಂದಿನ ಬಿಜಾಪುರ) ಜನಿಸಿದ ಶೋಲಾಪುರ್‍ಕರ್, ಮುಂಬೈನ ನೂತನ್ ಕಲಾಮಂದಿರ ಹಾಗೂ ಸರ್ ಜೆಜೆ ಕಲಾ ಶಾಲೆಯಲ್ಲಿ ಕಲಾ ಶಿಕ್ಷಣ ಪಡೆದರು.

ತಾವು ಕಲಿತ ಜೆಜೆ ಕಲಾ ಶಾಲೆ ಯಲ್ಲೇ 1975ರಿಂದ 1979ರವರೆಗೂ ಪ್ರಾಧ್ಯಾಪಕರಾಗಿದ್ದರು. ಅಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾದರು. ಜೆಜೆ ಕಲಾ ಶಾಲೆಯಲ್ಲಿನ ಸೇವೆಗಾಗಿ, 1970-73-75-78ರ ಸಾಲಿನಲ್ಲಿ ವಾರ್ಷಿಕ ಸಂಚಿಕೆಯ ಮುಖಪುಟ ವಿನ್ಯಾಸಕ್ಕಾಗಿ ರಾಷ್ಟ್ರೀಯ ಪುರಸ್ಕಾರ ಪಡೆದರು. ಟೈಮ್ಸ್ ಆಫ್ ಇಂಡಿಯಾ ಮತ್ತು ಡೈಲಿ ಹಾಗೂ ಫ್ರೀ ಪ್ರೆಸ್ ಜರ್ನಲ್ ನಿಯತಕಾಲಿಕ ಗಳಿಗೆ ಕಲಾವಿಮರ್ಶೆ ಬರೆಯುತ್ತಿದ್ದರು.
ನಂತರ 1982ರಲ್ಲಿ ಮೈಸೂರಲ್ಲಿ ದೃಶ್ಯ ಕಲೆಗಳ ಶಾಲೆಯೊಂದರ ಆರಂಭಕ್ಕೆ ಕರ್ನಾಟಕ ಸರ್ಕಾರದ ಆಹ್ವಾನದ ಮೇರೆಗೆ ಮೈಸೂರಿಗೆ ಆಗಮಿಸಿದರು. ಆಗಲೇ ಚಾಮರಾಜೇಂದ್ರ ದೃಶ್ಯ ಕಲೆಗಳ ಅಕಾಡೆಮಿ ಜನ್ಮ ತಾಳಿತು. ಇದರ ಮೊದಲ ಡೀನ್ ಹೆಗ್ಗಳಿಕೆಗೆ ಪಾತ್ರ ರಾದರಲ್ಲದೆ, ಈ ಹುದ್ದೆಯಲ್ಲಿ 1982ರಿಂದ 1988ರವರೆಗೂ ಕಾರ್ಯ ನಿರ್ವಹಿಸಿದರು. ನಿವೃತ್ತಿ ಬಳಿಕ ಮೈಸೂ ರಿನಲ್ಲೇ ನೆಲೆ ನಿಂತರು.

ಚಿತ್ರಕಲೆ, ಮರದ ಇನ್ಲೆ ವರ್ಕ್ ಕೆತ್ತನೆ ಕಲೆಯತ್ತ ಹೆಚ್ಚು ಆಕರ್ಷಿತರಾಗಿ ಹತ್ತಾರು ಕಲಾಕೃತಿಗಳನ್ನು ರಚಿಸಿದರು. ಅದರಲ್ಲೂ ಇನ್ಲೆ ಆರ್ಟ್‍ನಲ್ಲಿ 2ಡಿ, 3ಡಿ ಕಲಾ ಕೃತಿಗಳನ್ನು ರಚಿಸಿ ಪ್ರಶಂಸೆಗೆ ಪಾತ್ರರಾಗಿ ದ್ದರು. ಈ ಕಲಾಕೃತಿಗಳು ಮುಂಬೈ, ಬೆಂಗಳೂರು, ಕೊಚ್ಚಿ, ಗೋವಾ ಮೊದ ಲಾದೆಡೆ ಕಲಾ ಪ್ರದರ್ಶನದಲ್ಲಿ ಕಲಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾದವು. ಕ್ಯಾನ್ವಾಸ್, ಟೆರ್ರಾಕೋಟಾ, ಸೆರಾಮಿಕ್ ಟೈಲ್ಸ್, ಪೇಪರ್ ಮೇಲೆ ಚೈನೀಸ್ ಇಂಕ್ ತಂತ್ರ ಕಲಾ ಮಾಧ್ಯಮದಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದರು. ಕಲಾ ಕ್ಷೇತ್ರಕ್ಕೆ ತಮ್ಮ ಕೊಡುಗೆಗಾಗಿ 2008ರಲ್ಲಿ ಪ್ರೊ. ಶೋಲಾಪುರ್‍ಕರ್ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.

Leave a Reply

Your email address will not be published. Required fields are marked *

Translate »