ಪಾಂಡವಪುರ, ಮೇ 4(ಆರ್‍ಕೆ)- ಈಜಲು ಹೋಗಿ ಯುವಕನೋರ್ವ ಜಲ ಸಮಾಧಿ ಯಾದ ಘಟನೆ ತಾಲೂಕಿನ ಶಂಭೂನಹಳ್ಳಿ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ತಾಲೂಕಿನ ಕಸಬಾ ಹೋಬಳಿ, ಶಂಭೂನಹಳ್ಳಿ ಗ್ರಾಮದ ಲೇಟ್ ಎಸ್.ಕೆ.ವೆಂಕಟೇಶ್ ಮತ್ತು ಶ್ರೀಮತಿ ಪದ್ಮ ಅವರ ಏಕಮಾತ್ರ ಪುತ್ರ ಎಸ್.ವಿ.ವಿನಯಕುಮಾರ್ (23) ದುರಂತ ಸಾವಿಗೀಡಾದ ಯುವಕ. ಮೇ 1ರಂದು ಬೆಳಿಗ್ಗೆ ನಾಲ್ವರೊಂದಿಗೆ ಈಜಲು ತೆರಳಿದ್ದ ವೇಳೆ ನಾಲೆಯಲ್ಲಿ ಮುಳುಗಿದ್ದಾನೆ.
ಓರ್ವ ಆತನನ್ನು ರಕ್ಷಿಸಲು ಪ್ರಯತ್ನಿಸಿದನಾದರೂ, ಪ್ರಯೋ ಜನವಾಗಲಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಪಾಂಡವಪುರ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ನುರಿತ ಈಜುಗಾರರು ನಾಲೆಯಲ್ಲಿ ಶೋಧನೆ ನಡೆಸಿದರಾದರೂ, ದೇಹ ಪತ್ತೆಯಾಗಿರಲಿಲ್ಲ. ನಂತರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಾಲೆ ನೀರು ಬಂದ್ ಮಾಡಿ ಸಹಕರಿಸಿದ್ದರಿಂದ ರಾತ್ರಿ ಸುಮಾರು 10.45 ಗಂಟೆಗೆ ದುರಂತ ನಡೆದ ಸ್ಥಳದಿಂದ ಅನತಿ ದೂರದಲ್ಲಿ ವಿನಯ್‍ಕುಮಾರ್ ಮೃತದೇಹ ಪತ್ತೆಯಾಯಿತು. ಅಸಹಜ ಸಾವು(ಯುಡಿಆರ್) ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುವ ಪಾಂಡವಪುರ ಠಾಣೆ ಪೊಲೀಸರು, ಅಲ್ಲಿನ ಸಾರ್ವ ಜನಿಕ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೇ 2ರಂದು ಮಧ್ಯಾಹ್ನದ ವೇಳೆಗೆ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.