ಆಘಾತದಲ್ಲಿ ಪುನೀತ್ ಅಭಿಮಾನಿಗಳ ಸಾವು
ಮೈಸೂರು

ಆಘಾತದಲ್ಲಿ ಪುನೀತ್ ಅಭಿಮಾನಿಗಳ ಸಾವು

October 30, 2021

ಹನೂರು/ಹೊಸಪೇಟೆ, ಅ.೨೯-ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ದಿಂದ ಮನ ನೊಂದ ಅಭಿಮಾನಿ ಯೋರ್ವ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನೂಕು-ನುಗ್ಗಲಿ ನಲ್ಲಿ ಪೊಲೀಸ್ ಪೇದೆಯೋರ್ವನ ಕಾಲು ಮುರಿದಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾ ಪುರ ನಿವಾಸಿ ಕಾಳಪ್ಪ(೬೦) ಎಂಬಾತ ಆತ್ಮಹತ್ಯೆಗೆ ಶರಣಾದವನಾದರೆ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಮರೂರು ಗ್ರಾಮದ ಮುನಿ ಯಪ್ಪ(೨೮) ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಕಮಲಾಪುರದ ಕಾಳಪ್ಪ ಪುನೀತ್ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಮಧ್ಯಾಹ್ನ ಸುದ್ದಿವಾಹಿನಿಯಲ್ಲಿ ಪುನೀತ್ ಅವರ ನಿಧನದ ಸುದ್ದಿ ನೋಡಿ ಮನ ನೊಂದಿದ್ದಾರೆ. ಆಹಾರ ಸೇವಿಸದೆ ಸಂಜೆವರೆಗೆ ಟಿವಿ ನೋಡುತ್ತಾ ಕುಳಿತ್ತಿದ್ದ ಅವರು, ತುಂಗಭದ್ರಾ ಜಲಾಶಯದ ಕೆಳ ಮಟ್ಟದ ಕಾಲುವೆಗೆ ಜಿಗಿದಿದ್ದಾರೆ. ಈ ವೇಳೆ ಸ್ಥಳೀಯರು ಅವರನ್ನು ರಕ್ಷಿಸಿದರಾದರೂ, ನಂತರರಾತ್ರಿ ಮನೆಯಿಂದ ಹೊರ ಹೋಗಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಮತ್ತೆ ಹಾರಿದ್ದಾರೆ. ಅವರ ದೇಹ ನೀರಿನಲ್ಲಿ ಕೊಚ್ಚಿ ಹೋಗಿದೆ. ಹನೂರು ತಾಲೂಕು ಮರೂರು ಗ್ರಾಮದ ಮುನಿಯಪ್ಪ ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಚಿತ್ರಗಳನ್ನು ತಪ್ಪದೇ ಎರಡು-ಮೂರು ಬಾರಿ ನೋಡುತ್ತಿದ್ದ. ಅಲ್ಲದೇ ಪುನೀತ್ ಅವರ ಡೈಲಾಗ್‌ಗಳನ್ನು ಹೇಳಿ ಹಾಡು ಹಾಡಿ ಅವರಂತೆಯೇ ನಟಿಸುತ್ತಿದ್ದ. ಇಂದು ಮಧ್ಯಾಹ್ನ ಪುನೀತ್ ನಿಧನದ ಸುದ್ದಿ ಟಿವಿಯಲ್ಲಿ ನೋಡುತ್ತಿದ್ದಂತೆಯೇ ಮನ ನೊಂದು ಕುಸಿದು ಬಿದ್ದಿದ್ದಾನೆ. ಮನೆಯವರು ಆಸ್ಪತ್ರೆಗೆ ಕೊಂಡೊಯ್ದರಾದರೂ, ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಪೇದೆ ಕಾಲು ಮುರಿತ: ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕ್ರೀಡಾಂಗಣದ ಮಲ್ಯ ಸರ್ಕಲ್ ಗೇಟ್ ಬಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಪೇದೆ ಗಣೇಶ್ ನಾಯ್ಕ ಅವರು ಅಭಿಮಾನಿಗಳು ನಡೆಸಿದ ನೂಕು-ನುಗ್ಗಲಿನಲ್ಲಿ ಬಿದ್ದು ಕಾಲು ಮುರಿದು ಕೊಂಡಿದ್ದಾರೆ. ಇತರ ಪೊಲೀಸರು ಇವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

Translate »