ನರಹಂತಕ ವೀರಪ್ಪನ್ ಸಹಚರ ಬಿಲವೇಂದ್ರನ್ ಸಾವು
ಮೈಸೂರು

ನರಹಂತಕ ವೀರಪ್ಪನ್ ಸಹಚರ ಬಿಲವೇಂದ್ರನ್ ಸಾವು

August 21, 2020

ಮೈಸೂರು, ಆ.20(ಎಸಿಪಿ)-ಮಲೆಮಹದೇಶ್ವರ ಬೆಟ್ಟ ಸಮೀಪದ ಪಾಲಾರು ಸುರೈಕಾಯ್ ಮಡುವು ಅರಣ್ಯ ಪ್ರದೇಶದಲ್ಲಿ ಸ್ಫೋಟಕ ಸಿಡಿಸಿ ಐವರು ಪೊಲೀಸರು, ಇಬ್ಬರು ಅರಣ್ಯ ಸಿಬ್ಬಂದಿ ಸೇರಿದಂತೆ 22 ಮಂದಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ನರಹಂತಕ ವೀರಪ್ಪನ್ ಸಹಚರ ಬಿಲವೇಂದ್ರನ್ (66) ಕಳೆದ ರಾತ್ರಿ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಕಳೆದ 27 ವರ್ಷಗಳಿಂದ ಜೈಲಿನಲ್ಲಿದ್ದ ಈತ, ಆರು ದಿನಗಳ ಹಿಂದೆ ಕಾರಾಗೃಹದಲ್ಲಿ ಲಕ್ವಾ ಹೊಡೆದು ಪ್ರಜ್ಞಾ ಶೂನ್ಯನಾಗಿ ಬಿದ್ದಿದ್ದಾನೆ. ತಕ್ಷಣವೇ ಈತನನ್ನು ಕಾರಾಗೃಹದ ಅಧಿಕಾರಿಗಳು ಕೆ.ಆರ್.ಆಸ್ಪತ್ರೆಯ ಜೈಲ್ ವಾರ್ಡ್‍ಗೆ ದಾಖಲು ಮಾಡಿದ್ದರು. ಈತ ಬುಧವಾರ ರಾತ್ರಿ 11.30ರ ಸುಮಾರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಈ ಸಂಬಂಧ ಕಾರಾಗೃಹ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹೈಕೋರ್ಟ್ ಮತ್ತು ಮಾನವ ಹಕ್ಕು ಗಳ ಮಾರ್ಗಸೂಚಿಯಂತೆ ನ್ಯಾಯಾಧೀಶರಿಗೆ ಮಾಹಿತಿ ನೀಡಿ, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹ ವನ್ನು ವಾರಸುದಾರರಿಗೆ ಇಂದು ಸಂಜೆ ವೇಳೆಗೆ ಹಸ್ತಾಂ ತರಿಸಿದರು. ಆತನ ಸ್ವಗ್ರಾಮವಾದ ಹನೂರು ತಾಲೂಕು ಮಾರ್ಟಳ್ಳಿಯಲ್ಲಿ ಇಂದು ರಾತ್ರಿ ಅಂತ್ಯಕ್ರಿಯೆ ನೆರ ವೇರಿಸಲಾಯಿತು ಎಂದು ಬಿಲವೇಂದ್ರನ್‍ನ ಭಾಮೈದ ಮಣಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ವಿವರ: ತಮಿಳುನಾಡಿನಲ್ಲಿ ಮೆಟ್ಟೂರು ಅಣೆಕಟ್ಟು ನಿರ್ಮಾಣಕ್ಕಾಗಿ ಕೆಲ ಗ್ರಾಮಗಳನ್ನು ಸ್ವಾಧೀನಪಡಿಸಿ ಕೊಂಡಾಗ ಬಿಲವೇಂದ್ರನ್‍ನ ತಂದೆ ಮೋರೀಸ್ ಗೌಂಡರ್ ಕುಟುಂಬ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮಕ್ಕೆ ವಲಸೆ ಬಂದಿತ್ತು. ಮೋರೀಸ್ ಗೌಂಡರ್ ಕೊಳ್ಳೇಗಾಲ ತಾಲೂಕು ಬೋರ್ಡ್‍ನ ಸದಸ್ಯರಾಗಿಯೂ ಇದ್ದರು. ಬಿಲವೇಂದ್ರನ್ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ.

90ರ ದಶಕದಲ್ಲಿ ನರಹಂತಕ ವೀರಪ್ಪನ್ ಹಾವಳಿ ಹೆಚ್ಚಾ ಗಿತ್ತು. ಆತ ಮಾರ್ಟಳ್ಳಿ, ನೆಲ್ಲೂರು, ಹೂಗ್ಯಂ, ಮೀಣ್ಯಂ ಮುಂತಾ ದೆಡೆ ಸಂಚರಿಸುತ್ತಾ, ಅರಣ್ಯದಲ್ಲಿ ಶ್ರೀಗಂಧ ಮರಗಳನ್ನು ಕಳವು ಮಾಡುವುದು ಹಾಗೂ ಆನೆಗಳನ್ನು ಕೊಂದು, ದಂತ ಅಪಹರಿಸುವುದು ಯಥೇಚ್ಛವಾಗಿ ನಡೆಯುತ್ತಿತ್ತು. ಆ ಸಂದರ್ಭ ದಲ್ಲಿ ಬಿಲವೇಂದ್ರನ್ ವೀರಪ್ಪನ್‍ನ ಸಂಪರ್ಕಕ್ಕೆ ಬಂದಿದ್ದ.

ಪೊಲೀಸರನ್ನು ವೀರಪ್ಪನ್ ಹತ್ಯೆ ಮಾಡಲು ಆರಂಭಿಸಿ ದಾಗ ಮೈಸೂರು ಎಸ್ಪಿಯಾಗಿದ್ದ ಹರಿಕೃಷ್ಣ ಮತ್ತು ಮಹದೇ ಶ್ವರ ಬೆಟ್ಟದ ಸಬ್ ಇನ್ಸ್‍ಪೆಕ್ಟರ್ ಶಕೀಲ್ ಅಹಮದ್ ಅವರು ವೀರಪ್ಪನ್ ಸೆರೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. 1992ರ ಫೆಬ್ರವರಿ 14ರಂದು ಹರಿಕೃಷ್ಣ ಮತ್ತು ಶಕೀಲ್ ವೀರಪ್ಪನ್ ಸಹಚರ ಗುರುನಾಥನ್ ಎಂಬಾತನನ್ನು ರಾಮಾಪುರ ಸಮೀ ಪದ ಸತ್ಯಮಂಗಲ ಅರಣ್ಯದಲ್ಲಿ ಸೆರೆ ಹಿಡಿದಾಗ ವೀರಪ್ಪನ್ ಬಿಲವೇಂದ್ರನ್ ಮನೆಗೆ ಬರುತ್ತಾನೆಂಬ ಮಾಹಿತಿ ದೊರಕಿತ್ತು. ಗುರುನಾಥನ್ ಜೊತೆ ಬಿಲವೇಂದ್ರನ್ ಮನೆಗೆ ಪೊಲೀಸರು ತೆರಳುವಷ್ಟರಲ್ಲಿ ವೀರಪ್ಪನ್ ಕರಿಕಲ್ಲು ಗಣಿ ಉದ್ಯಮಿ ಸಂಪಂಗಿ ರಾಮಯ್ಯ ಅವರ ಮಗ ರಾಮಮೂರ್ತಿಯನ್ನು ಅಪಹರಿ ಸಿದ್ದ. ಆಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಗುರುನಾಥನ್ ಮೇಲೆ ಹರಿ ಕೃಷ್ಣ ಗುಂಡು ಹಾರಿಸಿ, ಹತ್ಯೆ ಗೈದಿದ್ದರು.

ನಂತರ ಬಿಲವೇಂದ್ರನ್ ನನ್ನು ಪೊಲೀಸರು ವಶಕ್ಕೆ ಪಡೆದರಾದರೂ, ಅಂದಿನ ಡಿಐಜಿ ಕೆ.ಆರ್.ಶ್ರೀನಿವಾಸನ್ ಸೂಚನೆ ಮೇರೆಗೆ ಆತನನ್ನು ಪೊಲೀಸರ ಮಾಹಿತಿದಾರ ನಾಗಿ ಬಳಸತೊಡಗಿದರು. ಆದರೆ ಆತ ಪೊಲೀಸರ ಜೊತೆ ಇದ್ದುಕೊಂಡೇ ಅವರ ಚಲನ-ವಲನಗಳನ್ನು ವೀರಪ್ಪನ್‍ಗೆ ತಿಳಿಸುತ್ತಿದ್ದ ಎಂಬ ಆರೋಪಗಳು ಪೊಲೀಸ್ ವಲಯದಲ್ಲಿ ಕೇಳಿಬಂದಿತ್ತು. ಈ ನಡುವೆ 1992ರ ಆಗಸ್ಟ್ 14ರಂದು ವೀರಪ್ಪನ್ ಎಸ್.ಪಿ.ಹರಿಕೃಷ್ಣ ಮತ್ತು ಶಕೀಲ್ ಅಹಮದ್ ಅವರನ್ನು ಹತ್ಯೆಗೈದಿದ್ದ. 1993ರ ಏಪ್ರಿಲ್ 9ರಂದು ಪಾಲಾರು ಬಳಿಯ ಸುರೈ ಕಾಯ್ ಮಡುವು ಅರಣ್ಯದಲ್ಲಿ ಕೆಎಸ್‍ಆರ್‍ಪಿ ವ್ಯಾನ್ ಅನ್ನು ವೀರಪ್ಪನ್ ಸ್ಫೋಟಿಸಿದ್ದ. ಆ ವ್ಯಾನ್‍ನಲ್ಲಿದ್ದ ಐವರು ಪೊಲೀ ಸರು, ಇಬ್ಬರು ಅರಣ್ಯ ಸಿಬ್ಬಂದಿ ಸೇರಿದಂತೆ 22 ಮಂದಿ ಮೃತಪಟ್ಟಿದ್ದರು. ತಮಿಳುನಾಡು ಎಸ್ಪಿ ರ್ಯಾಂಬೋ ಗೋಪಾಲ ಕೃಷ್ಣನ್ ತೀವ್ರವಾಗಿ ಗಾಯಗೊಂಡು ಬದುಕುಳಿದಿದ್ದರು.

ಶಂಕರ್ ಬಿದರಿ ನೇತೃತ್ವದ ವಿಶೇಷ ಪಡೆ ತೀವ್ರ ಕಾರ್ಯಾ ಚರಣೆಯಲ್ಲಿ ತೊಡಗಿದಾಗ ವೀರಪ್ಪನ್ ಸಹಚರರು ಅನೇ ಕರು ತಮಿಳುನಾಡಿನ ಕೆಲ ಗ್ರಾಮಗಳಲ್ಲಿ ತಲೆಮರೆಸಿಕೊಂಡಿ ದ್ದರು. ಹಾಗೇ ಬಿಲವೇಂದ್ರನ್ ಮಾರ್ಟಳ್ಳಿಯಿಂದ ತಮಿಳು ನಾಡಿನ ಈರೋಡು ಜಿಲ್ಲೆ ವೆಳ್ಳೂರು ಗ್ರಾಮಕ್ಕೆ ಸ್ಥಳಾಂತರ ಗೊಂಡಿದ್ದ. ಅಲ್ಲಿ ಜಮೀನೊಂದನ್ನು ಗುತ್ತಿಗೆ ಪಡೆದು ಬೇಸಾಯ ಮಾಡುವುದರ ಜೊತೆಗೆ ತಮಿಳುನಾಡು ವಿದ್ಯುತ್ ಇಲಾಖೆಯ ದಿನಗೂಲಿ ನೌಕರನಾಗಿಯೂ ಕೆಲಸ ಮಾಡುತ್ತಿದ್ದ.

ಪಾಲಾರು ಸ್ಫೋಟಕ್ಕೆ ಎಲೆಕ್ಟ್ರಿಕಲ್ ಕೆಲಸ ಗೊತ್ತಿದ್ದ ಬಿಲವೇಂ ದ್ರನ್ ಮತ್ತು ಕ್ವಾರಿಗಳನ್ನು ಸ್ಫೋಟ ಮಾಡುವುದರಲ್ಲಿ ನಿಪುಣ ನಾಗಿದ್ದ ಸೈಮನ್‍ನನ್ನು ವೀರಪ್ಪನ್ ಬಳಸಿಕೊಂಡಿದ್ದ ಎಂಬ ಮಾಹಿತಿ ವಿಶೇಷ ಪಡೆಗೆ ದೊರೆತ್ತಿತ್ತು. 1993ರ ಮೇ ತಿಂಗಳಿ ನಲ್ಲಿ ಅಂದಿನ ವಿಶೇಷ ಪಡೆಯ ಇನ್ಸ್‍ಪೆಕ್ಟರ್‍ಗಳಾಗಿದ್ದ ಬಿ.ಡಿ. ಮಂದಪ್ಪ ಮತ್ತು ವೆಂಕಟಸ್ವಾಮಿ ಅವರು ಬಿಲವೇಂದ್ರನ್ ನನ್ನು ಬಂಧಿಸಿದ್ದರು. ಈತನ ವಿರುದ್ಧ ರಾಮಾಪುರ ಪೊಲೀಸ್ ಠಾಣೆ ಮೇಲಿನ ದಾಳಿ, ಹರಿಕೃಷ್ಣ, ಶಕೀಲ್ ಅಹಮದ್ ಹತ್ಯೆ ಮತ್ತು ಪಾಲಾರು ಸ್ಫೋಟ ಪ್ರಕರಣಗಳಲ್ಲಿ ಟಾಡಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ವೇಳೆ ಎಸ್ಪಿ ರ್ಯಾಂಬೋ ಗೋಪಾಲಕೃಷ್ಣನ್ ಅವರು ಸಾಕ್ಷಿಯನ್ನಾಧರಿಸಿ ಬಿಲವೇಂದ್ರನ್ ಸೇರಿದಂತೆ 8 ಮಂದಿಗೆ ಟಾಡಾ ನ್ಯಾಯಾಲಯ 2001ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಇವರುಗಳು ಮೇಲ್ಮನವಿ ಸಲ್ಲಿಸಿದಾಗ ನಾಲ್ವರನ್ನು ಆರೋಪ ಮುಕ್ತಗೊಳಿಸಿ, ಬಿಲವೇಂದ್ರನ್, ಮೀಸೆ ಮಾದಯ್ಯ, ಜ್ಞಾನಪ್ರಕಾಶ್ ಮತ್ತು ಸೈಮನ್ ಅವರುಗಳಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಶಿಕ್ಷೆಗೆ ಗುರಿಯಾದವರು ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರಾದರೂ, ಅಂದಿನ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ, ನಂತರ ಬಂದ ಪ್ರತಿಭಾ ಪಾಟೀಲ್ ಅವರು ಕ್ಷಮಾದಾನ ಅರ್ಜಿಗಳನ್ನು ವಿಲೇವಾರಿ ಮಾಡಲೇ ಇಲ್ಲ. ನಂತರ ಬಂದ ಪ್ರಣಬ್ ಮುಖರ್ಜಿ ಅವರು ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ್ದರು.

ಗಲ್ಲು ಶಿಕ್ಷೆಗೆ ಗುರಿಯಾದವರ ಕ್ಷಮಾದಾನ ಅರ್ಜಿ ಸುದೀರ್ಘ ಕಾಲ ವಿಲೇವಾರಿ ಮಾಡದೇ ಇದ್ದುದರಿಂದ ಅವರುಗಳು ಪ್ರತೀ ದಿನ ಜೀವ ಭಯದಿಂದ ಮಾನಸಿಕ ವಾಗಿ ನೊಂದಿದ್ದರು. ಆದ್ದರಿಂದ ಅವರ ಗಲ್ಲು ಶಿಕ್ಷೆ ವಜಾ ಗೊಳಿಸಬೇಕೆಂದು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್, ಈ ನಾಲ್ವರಿಗೂ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ತೀರ್ಪು ನೀಡಿತ್ತು.

ಸೈಮನ್ 2018ರ ಮೇ ತಿಂಗಳಿನಲ್ಲಿ ಮೈಸೂರು ಕಾರಾಗೃಹದಲ್ಲೇ ಸಾವನ್ನಪ್ಪಿದ್ದು, ಇದೀಗ ಬಿಲವೇಂದ್ರನ್ ಮೃತಪಟ್ಟಿದ್ದಾನೆ. ಈ ಪ್ರಕರಣದಲ್ಲಿ ಮೀಸೆ ಮಾದಯ್ಯ ಮತ್ತು ಜ್ಞಾನಪ್ರಕಾಶ್ ಕಳೆದ 27 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಲೇ ಇದ್ದಾರೆ.

Translate »