ಸಾಲ ಬಾಧೆ: ಸಹಕಾರಿ ಬ್ಯಾಂಕ್ ಉದ್ಯೋಗಿ, ಅವರ ತಾಯಿ   ಕಪಿಲೆಗೆ ಹಾರಿ ಆತ್ಮಹತ್ಯೆ
ಮೈಸೂರು

ಸಾಲ ಬಾಧೆ: ಸಹಕಾರಿ ಬ್ಯಾಂಕ್ ಉದ್ಯೋಗಿ, ಅವರ ತಾಯಿ  ಕಪಿಲೆಗೆ ಹಾರಿ ಆತ್ಮಹತ್ಯೆ

October 20, 2020

ನಂಜನಗೂಡು, ಅ. 19(ರವಿ)- ವೈಯಕ್ತಿಕ ಸಮಸ್ಯೆ ಹಾಗೂ ಸಾಲ ಬಾಧೆಯಿಂದಾಗಿ ಸಹಕಾರಿ ಬ್ಯಾಂಕ್ ಮಹಿಳಾ ಉದ್ಯೋಗಿ ತನ್ನ ತಾಯಿ ಮತ್ತು ಮಗಳೊಂದಿಗೆ ನಂಜನ ಗೂಡಿನ ಕಪಿಲಾ ನದಿಗೆ ಹಾರಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಶ್ರೀರಂಗಪಟ್ಟಣ ತಾಲೂಕು ನಗುವನಹಳ್ಳಿ ಗ್ರಾಮದಲ್ಲಿರುವ ಸಹಕಾರಿ ಬ್ಯಾಂಕ್ ಶಾಖೆಯ ಉದ್ಯೋಗಿ ರಶ್ಮಿ(35) ಎಂಬುವರು ತನ್ನ ತಾಯಿ ಅಕ್ಕಯ್ಯಮ್ಮ (65) ಮತ್ತು ಪುತ್ರಿ ಮಿಂಚು(9) ಎಂಬುವರೊಂದಿಗೆ ಮಲ್ಲನಮೂಲೆ ಮಠದ ಬಳಿ ಕಪಿಲಾ ನದಿಗೆ ಹಾರಿದ್ದಾರೆ. ನದಿ ದಡದಲ್ಲಿ ಹುಲ್ಲು ಕುಯ್ಯುತ್ತಿದ್ದ ವ್ಯಕ್ತಿಯೋ ರ್ವರು ಮೂವರನ್ನು ರಕ್ಷಿಸಲು ಪ್ರಯತ್ನಿಸಿದ್ದು, ಬಾಲಕಿ ಮಿಂಚು ಮಾತ್ರ ಬದುಕುಳಿದಿದ್ದಾಳೆ.

ವಿವರ: ಬ್ಯಾಂಕ್ ಉದ್ಯೋಗಿಯಾಗಿರುವ ರಶ್ಮಿ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸು ತ್ತಿದ್ದು, ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಸಾಲ ಬಾಧೆಯಿಂದ ಜರ್ಝರಿತರಾಗಿದ್ದ ಅವರು, ತಾವು ವಾಸಿಸುತ್ತಿದ್ದ

ಮೈಸೂರಿನ ಯರಗನಹಳ್ಳಿ ಬಳಿ ಇರುವ ಜೆಎಸ್‍ಎಸ್ ಬಡಾವಣೆಯಿಂದ ತಾಯಿ ಅಕ್ಕಯ್ಯಮ್ಮ ಮತ್ತು ಪುತ್ರಿ ಮಿಂಚು ಅವರನ್ನು ಇಂದು ಬೆಳಗ್ಗೆ ನಂಜನಗೂಡಿಗೆ ಕರೆತಂದಿದ್ದಾರೆ. ಮಲ್ಲನಮೂಲೆ ಮಠದ ಬಳಿ ತನ್ನ ವೇಲ್‍ನಿಂದ ತಾಯಿ ಮತ್ತು ಪುತ್ರಿಯ ಕೈಗಳನ್ನು ತನ್ನ ಕೈಗೆ ಕಟ್ಟಿಕೊಂಡು ಮೂವರೂ ಒಟ್ಟಿಗೇ ನದಿಗೆ ಹಾರಿದ್ದಾರೆ.

ನೀರಿನಲ್ಲಿ ಮುಳುಗುತ್ತಿದ್ದಾಗ ರಕ್ಷಣೆಗಾಗಿ ಬಾಲಕಿ ಕೂಗುತ್ತಿರುವುದನ್ನು ಗಮನಿಸಿದ ನದಿ ದಡದಲ್ಲಿ ಜಾನುವಾರುಗಳಿಗೆ ಹುಲ್ಲು ಕುಯ್ಯುತ್ತಿದ್ದ ಬಸವನಪುರ ಗ್ರಾಮದ ಮಹದೇವಪ್ಪ ಎಂಬುವರು ತಕ್ಷಣವೇ ನದಿಗೆ ಧುಮುಕಿ ಮೂವರನ್ನೂ ದಡಕ್ಕೆ ಎಳೆತಂದ ರಾದರೂ, ಅಷ್ಟರಲ್ಲೇ ರಶ್ಮಿ ಸಾವನ್ನಪ್ಪಿದ್ದರು. ತೀವ್ರವಾಗಿ ನಿತ್ರಾಣಗೊಂಡಿದ್ದ ಅಕ್ಕಯ್ಯಮ್ಮ ಅವರನ್ನು ಆಂಬುಲೆನ್ಸ್ ಮೂಲಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಬಾಲಕಿ ಮಿಂಚು ಬದುಕುಳಿದಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಸಂಬಂಧ ರಶ್ಮಿ ಅವರ ಸಂಬಂಧಿಕರಾದ ಮೈಸೂರಿನ ಕೆ.ಆರ್. ಸ್ಟ್ರೀಟ್ ನಿವಾಸಿ ಜೀವನ್ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ ತಳವಾರ್, ಸಬ್ ಇನ್ಸ್‍ಪೆಕ್ಟರ್ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ನಂಜನ ಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

Translate »