1ರಿಂದ 8ನೇ ತರಗತಿ ಆರಂಭ ಸಂಬಂಧ ಆ.30ಕ್ಕೆ ನಿರ್ಧಾರ
News

1ರಿಂದ 8ನೇ ತರಗತಿ ಆರಂಭ ಸಂಬಂಧ ಆ.30ಕ್ಕೆ ನಿರ್ಧಾರ

August 13, 2021

ಬೆಂಗಳೂರು, ಆ.12(ಕೆಎಂಶಿ)- ಒಂದರಿಂದ 8ನೇ ತರಗÀತಿಗಳನ್ನು ಪ್ರಾರಂಭಿಸುವ ಸಂಬಂಧ ಆ.30ರಂದು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆ.30ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಮಕ್ಕಳ ತಜ್ಞರು ಹಾಗೂ ತಜ್ಞರ ಸಲಹಾ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗು ವುದು. ಶಾಲೆಗಳನ್ನು ಆರಂಭಿಸುವಂತೆ ದಿನದಿಂದ ದಿನಕ್ಕೂ ಪೋಷಕರಿಂದ ಒತ್ತಾಯ ಮತ್ತು ಬೇಡಿಕೆ ಬರುತ್ತಿದೆ. ಆದರೆ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ನಿರ್ಧಾರ ಕೈಗೊಳ್ಳುತ್ತೇವೆ. ಕೋವಿಡ್ ಒಂದು ಮತ್ತು 2ನೇ ಅಲೆಯಲ್ಲಿ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರಿಲ್ಲ. ಶೇ.2ರಷ್ಟು ಪರಿಣಾಮ ಇದ್ದರೂ, ಇದರಲ್ಲಿ ಹೆಚ್ಚು ಸಾವು-ನೋವು ಉಂಟಾಗಿಲ್ಲ. ಕೋವಿಡ್-19 ಸಾಂಕ್ರಾಮಿಕ ಮಕ್ಕಳ ಮೇಲೆ ಪ್ರಭಾವ ಬೀರುವುದಿಲ್ಲ ಎಂಬ ಅಭಿಪ್ರಾಯ ತಜ್ಞರಿಂದ ಬಂದಿದೆ. ಆದರೂ 30ರ ಸಭೆಯಲ್ಲಿ ಎಲ್ಲ ಕೋನಗಳಿಂದಲೂ ಚರ್ಚಿಸಿ, ತೀರ್ಮಾನ ಮಾಡಲಾಗುವುದು ಎಂದರು. ಈಗಾಗಲೇ ನಿರ್ಧರಿಸಿರುವಂತೆ ಒಂಭತ್ತರಿಂದ 12ನೇ ತರಗತಿಗಳನ್ನು ಆ.23ರಿಂದ ಪ್ರಾರಂಭಿಸಲಾಗುವುದು ಎಂದರು. ಕೋವಿಡ್ ನಿಯಮಾವಳಿ ಗಳನ್ನು ಕಡ್ಡಾಯವಾಗಿ ಜಾರಿಗೆ ತಂದು ತರಗತಿಗಳನ್ನು ಆರಂಭಿಸುವ ಸಂಬಂಧ ನಾಳೆ ನಾನು ಜಿಲ್ಲಾ ಶಿಕ್ಷಣಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತೇನೆ ಎಂದು ತಿಳಿಸಿದರು.

Translate »