ಮೈಸೂರು ಪಾಲಿಕೆ 36ನೇ ವಾರ್ಡ್‍ಗೆ ಉಪಚುನಾವಣೆ ಘೋಷಣೆ
ಮೈಸೂರು

ಮೈಸೂರು ಪಾಲಿಕೆ 36ನೇ ವಾರ್ಡ್‍ಗೆ ಉಪಚುನಾವಣೆ ಘೋಷಣೆ

August 13, 2021

ಮೈಸೂರು, ಆ.12(ಎಂಟಿವೈ)- ಕಳೆದ ಚುನಾವಣೆ ವೇಳೆ ಸಲ್ಲಿಸಿದ್ದ ದಾಖಲೆಯಲ್ಲಿ ಆದಾಯ ಸಂಬಂಧ ತಪ್ಪು ಮಾಹಿತಿ ನೀಡಿದ್ದ ಮೈಸೂರು ಮಹಾನಗರ ಪಾಲಿಕೆಯ 36ನೇ ವಾರ್ಡ್ ಸದಸ್ಯೆ (ಮೇಯರ್ ಕೂಡಾ ಆಗಿದ್ದ) ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವವನ್ನು ನ್ಯಾಯಾಲಯ ಅಸಿಂಧುಗೊಳಿಸಿದ್ದರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಸೆ.3ರಂದು ಮತದಾನ ನಡೆಯಲಿದೆ. ರಾಜ್ಯ ಚುನಾವಣಾ ಆಯೋಗ ಇಂದು (ಗುರುವಾರ) ಬೆಳಗ್ಗೆ ಉಪ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಉಪಚುನಾವಣೆಗೆ ಆ.16ರಂದು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸಬಹುದಾಗಿದೆ.

ಆ.23ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಆ.24ರಂದು ನಾಮಪತ್ರ ಪರಿಶೀಲನೆ, ಆ.26ರಂದು ನಾಮಪತ್ರ ಹಿಂಪ ಡೆಯಲು ಕೊನೆ ದಿನ. ಸೆ.3ರ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ. ಸೆ.6ಕ್ಕೆ ಮತ ಎಣಿಕೆ ನಡೆಯಲಿದೆ. ಈ ಹಿಂದೆ ಪಾಲಿಕೆಗೆ ನಡೆದ ಚುನಾವಣೆಯಲ್ಲಿ 36ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ರುಕ್ಮಿಣಿ ಮಾದೇಗೌಡ ಅವರು ನಾಮಪತ್ರ ಸಲ್ಲಿಸುವ ವೇಳೆ ನೀಡಿದ್ದ ಆದಾಯ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಪ್ರತಿಸ್ಪರ್ಧಿ ರಜನಿ ಅಣ್ಣಯ್ಯ ನ್ಯಾಯಾಲಯಕ್ಕೆ ಆಕ್ಷೇಪ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಜಿಲ್ಲಾ ನ್ಯಾಯಾಲಯ ಆದಾಯ ಮೂಲದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರಿಂದ ರುಕ್ಮೀಣಿ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಿತ್ತು. ಜಿಲ್ಲಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದರಿಂದ ರುಕ್ಮಿಣಿ ಅವರ ಸದಸ್ಯತ್ವ ಅಸಿಂಧುಗೊಂಡಿತು.

Translate »