ಅಧಿಕಾರಿಗಳ ನೇತೃತ್ವದಲ್ಲಿ 11 ಸಮಿತಿ ರಚನೆಗೆ ನಿರ್ಧಾರ
ಮೈಸೂರು

ಅಧಿಕಾರಿಗಳ ನೇತೃತ್ವದಲ್ಲಿ 11 ಸಮಿತಿ ರಚನೆಗೆ ನಿರ್ಧಾರ

June 2, 2022

ಮೈಸೂರು, ಜೂ. 1(ಎಂಟಿವೈ)- ಮೈಸೂರಲ್ಲಿ ಜೂ.21 ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳು ತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮದ ಕುರಿತು ಮೈಸೂರಿನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಬುಧವಾರ ಬೆಳಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಯೋಗ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು.

ಜಿಲ್ಲಾಧಿಕಾರಿ ತಮ್ಮ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11ರಿಂದ 12.30ರವರೆಗೆ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವು ದರಿಂದ ಯಾವುದೇ ಲೋಪವಾಗದಂತೆ ಕಟ್ಟೆಚ್ಚರ ವಹಿಸ ಬೇಕಾಗಿದೆ. ಕಾರ್ಯಕ್ರಮಕ್ಕೆ ಇನ್ನು 20 ದಿನ ಇರುವುದರಿಂದ ವಿವಿಧ ಜವಾಬ್ದಾರಿ ಹಂಚಿಕೆ ಮಾಡುವುದು ಸೂಕ್ತ. ಇದಕ್ಕಾಗಿ ವಿವಿಧ ಸಮಿತಿ ರಚಿಸುವ ಅನಿವಾರ್ಯತೆ ಇದೆ ಎಂದರು.

ಕಾರ್ಯಕ್ರಮದ ಯಶಸ್ಸಿಗಾಗಿ 11 ಸಮಿತಿ ರಚಿಸುವ ಮೂಲಕ ಪ್ರತಿಯೊಂದು ಸಮಿತಿಗೂ ವಿವಿಧ ಜವಾಬ್ದಾರಿ ನೀಡಲಾಗು ತ್ತದೆ. ಸಮಿತಿಗೆ ಓರ್ವ ಅಧಿಕಾರಿಯನ್ನು ನಿಯೋಜಿಸಿ, ಅವ ರೊಂದಿಗೆ ಕೆಲಸ ಮಾಡಲು ಯೋಗ ಸಂಸ್ಥೆಗಳ ಪದಾಧಿಕಾರಿ ಗಳು ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳ ಸಹಕಾರ ದೊರೆಯುವಂತೆ ಮಾಡಲಾಗುತ್ತದೆ ಎಂದರು.

ಮತ್ತೊಂದು ಸಭೆ: ಕಾರ್ಯಕ್ರಮದ ರೂಪುರೇಷೆ, ಕೈಗೊಳ್ಳ ಬೇಕಾದ ಕ್ರಮಗಳ ಕುರಿತಂತೆ ಮೂರು ದಿನದ ನಂತರ ಆಯುಷ್ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸ ಲಾಗುವುದು. ಈ ವೇಳೆ 11 ಸಮಿತಿಗಳ ಪೂರ್ಣ ವಿವರ ಹಾಗೂ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗುತ್ತದೆ.

ವಿವಿಧ ಸ್ಥಳದ ಪ್ರಸ್ತಾಪ:ಯೋಗ ದಿನದಲ್ಲಿ ಮೈಸೂರಲ್ಲಿ ನಡೆ ಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುತ್ತಿರುವುದ ರಿಂದ ಗಿನ್ನಿಸ್ ದಾಖಲೆ ಮಾಡಬೇಕೆಂಬ ಬಯಕೆ ಮೈಸೂರಿನ ಯೋಗ ಸಂಸ್ಥೆಗಳದ್ದಾಗಿದೆ. ಆದರೆ ಜಿಲ್ಲಾಡಳಿತಕ್ಕೆ ಭದ್ರತೆಯದ್ದೇ ಚಿಂತೆ. ಈ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಪ್ರಧಾನಿಗಳು ಪಾಲ್ಗೊಳ್ಳುವುದರಿಂದ ಅಲ್ಲಿ 12-15 ಸಾವಿರ ಮಂದಿಯಷ್ಟೇ ಯೋಗ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಯೋಗ ಒಕ್ಕೂಟವು ಜಿಲ್ಲಾ ಡಳಿತಕ್ಕೆ ಸಲಹೆ ನೀಡಿದ್ದು, ಅರಮನೆ ಆವರಣದಿಂದ ಆರಂಭ ವಾಗಿ ಜಯಮಾರ್ತಾಂಡ ದ್ವಾರದ ಮೂಲಕ ದೊಡ್ಡಕೆರೆ ಮೈದಾನ, ಬಿ.ಎನ್.ರಸ್ತೆ, ಹಾರ್ಡಿಂಜ್ ವೃತ್ತ, ಚಾಮರಾಜೇಂದ್ರ ವೃತ್ತ, ಕೆ.ಆರ್. ವೃತ್ತ ನ್ಯೂ ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸ್ ರಸ್ತೆ, ಅರ ಮನೆ ಸುತ್ತಲೂ ಕುಳಿತುಕೊಂಡು ಯೋಗಾಸನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರೆ, ಲಕ್ಷಕ್ಕಿಂತಲೂ ಹೆಚ್ಚು ಮಂದಿ ಯೋಗಪಟು ಗಳು ಪಾಲ್ಗೊಳ್ಳಬಹುದಾಗಿದೆ. ಇದರಿಂದ ದಾಖಲೆ ಮಾಡಬಹು ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಲಹೆಯನ್ನು ಜಿಲ್ಲಾಡಳಿತ ಸ್ವೀಕರಿಸಿದೆಯಾದರೂ ತನ್ನ ನಿಲುವು ಪ್ರಕಟಿಸಿಲ್ಲ ಎಂದರು.

ಚುನಾವಣಾ ನೀತಿ ಸಂಹಿತೆ ಅಡ್ಡಿ: ಯೋಗ ದಿನದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಲು ನೀತಿ ಸಂಹಿತೆ ಅಡ್ಡಿಯಾಗಿದೆ. ದಕ್ಷಿಣ ಪದವೀಧರರ ಕ್ಷೇತ್ರದ ಚುನಾ ವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನೀತಿ ಸಂಹಿತೆಯಿಂದಾಗಿ ಅಧಿಕಾರಿಗಳು ಯೋಗ ಸಂಸ್ಥೆಗಳ ಪ್ರತಿನಿಧಿಯೊಂದಿಗೆ ಸಭೆ ನಡೆಸುತ್ತಿದ್ದರೂ, ನಿರ್ಧಾರ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ.

ಅರಮನೆಯಲ್ಲಿ ಯಾರ್ಯಾರು: ಯೋಗ ಪ್ರದರ್ಶನದ ವೇಳೆ ಅರಮನೆ ಆವರಣದಲ್ಲಿ 12-15 ಸಾವಿರ ಮಂದಿ ಸೇರುವುದಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಯಾರು ಯಾರನ್ನು ಅರಮನೆಯಲ್ಲಿ ಯೋಗ ಮಾಡಲು ಬಿಡಬೇಕು ಎನ್ನುವುದು ಇನ್ನು ನಿರ್ಧಾರವಾಗಿಲ್ಲ. ನೀತಿ ಸಂಹಿತೆ ಮುಗಿದ ನಂತರ ಜೂ.13ರ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅರಮನೆ ಆವರಣದಲ್ಲಿ ಯಾರಿಗೆ ಯೋಗ ಮಾಡಲು ಅವಕಾಶ ನೀಡಬೇಕು ಎನ್ನುವುದನ್ನು ತಿಳಿಸಲಿದ್ದಾರೆ. ಆ ನಂತರವಷ್ಟೇ ಯಾರಿಗೆ ಅರಮನೆ ಆವರಣದಲ್ಲಿ ಯೋಗ ಮಾಡಬಹುದು ಎನ್ನುವುದು ಖಚಿತವಾಗಲಿದೆ. ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಆರ್.ಚೇತನ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ ರೆಡ್ಡಿ, ಮುಡಾ ಆಯುಕ್ತ ಜಿ.ಟಿ.ದಿನೇಶ್‍ಕುಮಾರ್, ಎಡಿಸಿ ಡಾ. ಮಂಜುನಾಥಸ್ವಾಮಿ, ಜಿ.ಪಂ ಸಿಇಓ ಬಿ.ಆರ್.ಪೂರ್ಣಿಮಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್. ಸೀತಾ ಲಕ್ಷ್ಮೀ, ಡಿಹೆಚ್‍ಓ ಡಾ.ಕೆ.ಹೆಚ್.ಪ್ರಸಾದ್, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಡಿಡಿಪಿಐ ರಾಮರಾಜೇಅರಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಯೋಗ ಸಂಸ್ಥೆಗಳ ಶ್ರೀಹರಿ, ಶಿವಪ್ರಕಾಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »