ಒಕ್ಕಲಿಗರ ಅಭಿವೃದ್ಧಿ  ನಿಗಮ ಸ್ಥಾಪನೆ ಘೋಷಣೆ
ಮೈಸೂರು

ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆ

March 10, 2021

ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದಿಸಿದ ಸಮುದಾಯದ ಸಚಿವರು, ಶಾಸಕರು
ಬೆಂಗಳೂರು, ಮಾ.9(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ 2021-22ನೇ ಸಾಲಿನ ಮುಂಗಡ ಪತ್ರದಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆಗೆ ಒಕ್ಕಲಿಗ ಸಮುದಾಯದ ಎಲ್ಲ ಸಚಿವರು, ಶಾಸಕರು ಹಾಗೂ ಮುಖಂಡರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಅಭಿ ನಂದಿಸಿದರು. ವಿಧಾನಸೌಧದಲ್ಲಿ ಉಪಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಯಡಿಯೂರಪ್ಪ ಅವರನ್ನು ಸನ್ಮಾನಿಸಿ, ಆದಷ್ಟು ಶೀಘ್ರ ನಿಗಮ ಸ್ಥಾಪಿಸಿ ಅಧ್ಯಕ್ಷರನ್ನು ನೇಮಕ ಮಾಡುವಂತೆ ಮನವಿ ಮಾಡಿದರು. ಮುಂಗಡ ಪತ್ರದಲ್ಲಿಯೇ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಮಾಡಿದ್ದಕ್ಕೆ ಸಮುದಾಯದ ಎಲ್ಲ ಸ್ವಾಮೀಜಿಗಳಿಗೆ, ಹಿರಿಯರಿಗೆ, ಮುಖಂಡರಿಗೆ ಸಂತೋಷವಾಗಿದೆ ಎಂಬ ಸಂಗತಿಯನ್ನು ಡಾ.ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಅಭಿನಂದನೆ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಯಾಗಿ ಹರ್ಷ ವ್ಯಕ್ತಪಡಿಸಿ, ಆದಷ್ಟು ಶೀಘ್ರ ನೂತನ ನಿಗಮಕ್ಕೆ ಸಮರ್ಥ ಅಧ್ಯಕ್ಷರ ನೇಮಕ ಮಾಡುವ ಭರವಸೆ ನೀಡಿದರು. ನಿಯೋಗದಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ನಾರಾಯಣ ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಜೀವರಾಜ್, ಶಾಸಕರಾದ ಕೆ.ಜಿ.ಬೋಪಯ್ಯ, ಅರಗ ಜ್ಞಾನೇಂದ್ರ, ಡಾ.ರಾಜೇಶ್‍ಗೌಡ, ಮಸಾಲೆ ಜಯರಾಂ, ಪರಿಷತ್ ಸದಸ್ಯ ಪುಟ್ಟಣ್ಣ ಮುಂತಾದವರು ಉಪಸ್ಥಿತರಿದ್ದರು.

Translate »