ಮೈಸೂರಲ್ಲಿ ಎರಡು ದಿನಗಳ  ಡಿಫೆನ್ಸ್ ಪೆನ್ಷನ್ ಅದಾಲತ್ ಆರಂಭ
ಮೈಸೂರು

ಮೈಸೂರಲ್ಲಿ ಎರಡು ದಿನಗಳ  ಡಿಫೆನ್ಸ್ ಪೆನ್ಷನ್ ಅದಾಲತ್ ಆರಂಭ

August 24, 2018
  •  ಕೊಡಗು ನೆರೆ ಹಾವಳಿಯಿಂದಾಗಿ ಅದಾಲತ್‍ನಿಂದ ದೂರ ಉಳಿದ ಬಹುತೇಕ ಮಾಜಿ ಸೈನಿಕರು
  •  ಡಿಸೆಂಬರ್‍ನಲ್ಲಿ ಮತ್ತೊಂದು ಅದಾಲತ್‍ಗೆ ಚಿಂತನೆ

ಮೈಸೂರು: ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಎರಡು ದಿನಗಳ 159ನೇ ಡಿಫೆನ್ಸ್ ಪೆನ್ಷನ್ ಅದಾಲತ್ ಇಂದಿನಿಂದ ಆರಂಭವಾಯಿತು.

ವಾಯುದಳ, ನೌಕಾದಳ ಸೇರಿದಂತೆ ವಿವಿಧ ಸೇನೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಜಿ ಸೈನಿಕರ ಪಿಂಚಣಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಸಂಬಂಧಿತ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸುವ ಉದ್ದೇಶದಿಂದ ಭಾರತ ಸರ್ಕಾರದ ರಕ್ಷಣಾ ಸಚಿವಾಲಯವು ಮೈಸೂರಿನಲ್ಲಿ ಎರಡು ದಿನಗಳ ಪೆನ್ಷನ್ ಅದಾಲತ್ ಏರ್ಪಡಿಸಿದೆ.

ಅಲಹಾಬಾದಿನ ಪ್ರಿನ್ಸಿಪಾಲ್ ಕಂಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್(ಪೆನ್‍ಷನ್) ವತಿಯಿಂದ ಆಯೋಜಿಸಿರುವ ಅದಾಲತ್ ಅನ್ನು ಡಿಫೆನ್ಸ್ ಅಕೌಂಟ್ಸ್ ಪ್ರಧಾನ ನಿಯಂತ್ರಕ ಐಡಿಎಎಸ್ ಅಧಿಕಾರಿ ಪ್ರವೀಣ್‍ಕುಮಾರ್ ಹಾಗೂ ಡೆಲ್ಲಿ ಕಂಟೋನ್ಮೆಂಟ್‍ನ ಅಡಿಷನಲ್ ಕಂಟ್ರೋಲರ್ ಜನರಲ್ ಆಫ್ ಡಿಫೆನ್ಸ್ ಅಕೌಂಟ್ಸ್ ಆದ ಐಡಿಎಎಸ್ ಅಧಿಕಾರಿ ಸಂಜೀವ್‍ಮಿತ್ತಲ್, ದೀಪ ಬೆಳಗಿಸುವ ಮೂಲಕ ಅದಾಲತ್ ಉದ್ಘಾಟಿಸಿದರು.

ಕಲಾಮಂದಿರದಲ್ಲಿ ನೆರೆದಿದ್ದ ಮಾಜಿ ಸೈನಿಕರನ್ನುದ್ದೇಶಿಸಿ ಮಾತನಾಡಿದ ಸಂಜೀವ್‍ಮಿತ್ತಲ್, ದೇಶದ ರಕ್ಷಣಾ ಕಾರ್ಯದಲ್ಲಿ ಜೀವದ ಹಂಗು ತೊರೆದು ಗಡಿಭಾಗದಲ್ಲಿ ಸೇವೆ ಸಲ್ಲಿಸಿದ ಸೈನಿಕರ ಬಗ್ಗೆ ಭಾರತ ರಕ್ಷಣಾ ಸಚಿವಾಲಯವು ಅತೀವ ಗೌರವ ಭಾವನೆ ಇರಿಸಿಕೊಂಡಿದೆ. ನಿವೃತ್ತಿ ನಂತರ ಅವರಿಗೆ ಅಥವಾ ಅವರ ಕುಟುಂಬದವರಿಗೆ ಸಿಗಬೇಕಾದ ಪಿಂಚಣಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸುವುದೂ ಸಹ ಅಷ್ಟೇ ಮುಖ್ಯವಾಗಿದೆ ಎಂದರು. ಸೇವೆಯಿಂದ ನಿವೃತ್ತರಾದ ನಂತರ ಬಹುತೇಕ ಮಾಜಿ ಸೈನಿಕರು ಜಿಲ್ಲಾ ಕೇಂದ್ರಗಳಿಂದ ದೂರದ ಊರುಗಳಿಗೆ ತೆರಳಿ ವಾಸಿಸುತ್ತಿರುವುದರಿಂದ ಪಿಂಚಣಿ ಸಂಬಂಧಿತ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಇತ್ಯರ್ಥಪಡಿಸಲು ನಿಮ್ಮ ಬಳಿಯೇ ಅದಾಲತ್ ನಡೆಸುವುದಕ್ಕಾಗಿ ಮೈಸೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪೆನ್ಷನ್ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದರೆ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ನೀಡಿ ಕೂಪನ್ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಿಕೊಂಡು ಅದಾಲತ್‍ನ ಉಪಯೋಗ ಪಡೆದುಕೊಳ್ಳುವಂತೆಯೂ ಮಿತ್ತಲ್ ಸಲಹೆ ನೀಡಿದರು.

ಪಿಸಿಡಿಎ ಬೆಂಗಳೂರು ಇದರ ಐಡಿಎಎಸ್ ಅಧಿಕಾರಿ ಕೆ.ಸುರೇಶ್‍ಬಾಬು, ಶ್ರೀಮತಿ ಇಂದರ್‍ಜಿತ್‍ಕುಮಾರ್, ಮೈಸೂರಿನ ಡಿಎಫ್‍ಆರ್‍ಎಲ್ ಅಸೋಸಿಯೇಟ್ ಡೈರೆಕ್ಟರ್ ಡಾ.ಜೆ.ಕೆ.ಶರ್ಮಾ, ಕರ್ನಾಟಕ ಸರ್ಕಾರದ ಸೈನಿಕ ವೆಲ್‍ಫೇರ್ ಬೋರ್ಡ್ ಡೈರೆಕ್ಟರ್ ಆದ ಬ್ರಿಗೇಡಿಯರ್(ನಿವೃತ್ತ) ಎಸ್.ಬಿ.ಸಜ್ಜನ್ ಹಾಗೂ ಐಡಿಎಎಸ್ ಅಧಿಕಾರಿ ಆರ್.ಎಂ.ಸುಧೀರ್ ಅದಾಲತ್‍ನಲ್ಲಿ ಭಾಗವಹಿಸಿದ್ದರು.

ಮೇಜರ್ ಜನರಲ್(ನಿವೃತ್ತ)ಎಸ್.ಜಿ.ಬಂಬತ್ಕರೆ ಸೇರಿದಂತೆ ಹಲವು ನಿವೃತ್ತ ಹಿರಿಯ ಸೇನಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಜಿ ಸೈನಿಕರು ಹಾಗೂ ಕುಟುಂಬ ವರ್ಗಗಳಿಗೆ ಬರಬೇಕಾದ ಸೌಲಭ್ಯಗಳ ಬಗ್ಗೆ ಮಾತನಾಡಿದರು.
ವಿ ಖೇರ್ ಎಕ್ಸ್-ಸರ್ವೀಸ್‍ಮನ್ ಟ್ರಸ್ಟ್‍ನ ಮುಖ್ಯಸ್ಥರೂ ಆದ ಮಾಜಿ ಸೈನಿಕ ಸುಬ್ರಮಣಿ ಪಾಲ್ಗೊಂಡು ತಮ್ಮ ಟ್ರಸ್ಟ್ ಮೂಲಕ ಮಾಜಿ ಸೈನಿಕರ ಕಲ್ಯಾಣ ಯೋಜನೆ ಜಾರಿಗೆ ಪ್ರಯತ್ನಿಸುತ್ತಿದ್ದಾರೆ.

ಮೊದಲ ದಿನವಾದ ಇಂದು ಸುಮಾರು ಒಂದು ಸಾವಿರ ಮಂದಿ ಅದಾಲತ್‍ನಲ್ಲಿ ಭಾಗವಹಿಸಿದ್ದರು. ಕೊಡಗಿನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪ, ಸಂತ್ರಸ್ತರ ರಕ್ಷಣೆ ಹಾಗೂ ನೆರವಿಗೆ ಧಾವಿಸಿರುವುದರಿಂದ ಇನ್ನೂ ಹಲವು ಮಂದಿ ಹಾಜರಾಗಲು ಸಾಧ್ಯವಾಗಿಲ್ಲ.

ಮಾಜಿ ಸೈನಿಕರ ಅನುಕೂಲಕ್ಕಾಗಿ 2018ರ ಡಿಸೆಂಬರ್ ಮಾಹೆಯಲ್ಲಿ ಮತ್ತೊಂದು ಪಿಂಚಣಿ ಅದಾಲತ್ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲಾಮಂದಿರದಲ್ಲಿ ಸುಮಾರು 15 ಟೇಬಲ್‍ಗಳಲ್ಲಿ ಸೇನಾ ಅಧಿಕಾರಿಗಳು ಕುಳಿತು, ಅರ್ಜಿ ನಮೂನೆ ವಿತರಿಸಿ, ಟೋಕನ್ ನೀಡಿ ನಂತರ ಕ್ರಮವಾಗಿ ಮಾಜಿ ಸೈನಿಕರ ಅಹವಾಲು ಆಲಿಸಿದ ನಂತರ ಇತ್ಯರ್ಥಗೊಳಿಸಿದರು.

ಅದಾಲತ್‍ನಲ್ಲಿ ಭಾಗವಹಿಸಿದ ಎಲ್ಲರಿಗೂ ಕಲಾಮಂದಿರದ ಆವರಣದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಡಿಎಫ್‍ಆರ್‍ಎಲ್ ಅಧಿಕಾರಿಗಳೂ ಹಾಜರಿದ್ದು, ಸಕಲ ವ್ಯವಸ್ಥೆ ಮಾಡಿದರು.

Translate »