ಅರ್ಹರಾದರೂ ದೇಜಗೌ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಲಿಲ್ಲ
ಮೈಸೂರು

ಅರ್ಹರಾದರೂ ದೇಜಗೌ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಲಿಲ್ಲ

December 15, 2020

ಮೈಸೂರು,ಡಿ.14(ಪಿಎಂ)-ಮೇರು ಸಾಹಿತಿಯಾದ ದೇಜಗೌ ಅವರಿಗಿಂತ ಚಿಕ್ಕವರು, ಕಡಿಮೆ ಯೋಗ್ಯತೆವುಳ್ಳ ಎಷ್ಟೋ ಮಂದಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಆದರೆ ದೇಜಗೌ ಅವರಿಗೇ ಈ ಪ್ರಶಸ್ತಿ ಲಭಿಸಲಿಲ್ಲ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಅವರು, ಅರ್ಹರಿಗೆ ಪುರಸ್ಕಾರ ದೊರೆಯದೇ ಇರುವುದು ಶೋಚನೀಯ ಸಂಗತಿ. ಈ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದರು. ದೇಜಗೌ (ದೇ.ಜವರೇಗೌಡ) ಹೆಸರು ಯಾರೂ ತಾನೆ ಕೇಳಿಲ್ಲ. ಅವರೊಬ್ಬ ಮೇರು ಸಾಹಿತಿ. ಅವರಿಗೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರಲಿಲ್ಲ. ಅವರಿಗಿಂತ ಚಿಕ್ಕವರು, ಕಡಿಮೆ ಯೋಗ್ಯತೆ ಒಳ್ಳವರು ಎಷ್ಟೋ ಮಂದಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇರಲಿ, ಎಷ್ಟೊ ಮಂದಿ ಅರ್ಹರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿಲ್ಲ. ಜ್ಞಾನಪೀಠ ಪ್ರಶಸ್ತಿ ಪ್ರಶ್ನೆಯೇ ಬೇರೆ. ಅದು ವರ್ಷಕ್ಕೆ ಇಡೀ ಭಾರತದಲ್ಲಿ ಒಬ್ಬರಿಗೆ ಮಾತ್ರವೇ ಕೊಡಮಾಡುವುದಾಗಿದೆ. ಆದ್ದರಿಂದ ಜ್ಞಾನಪೀಠ ಪ್ರಶಸ್ತಿ ಬಂದಿಲ್ಲವೆಂದು ಯಾರ ಬಗ್ಗೆಯೂ ವಿಷಾದ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ಸಿಪಿಕೆ ಹೇಳಿದರು.

ನನಗಿಂತ ಮೊದಲೇ ನನ್ನ ವಿದ್ಯಾರ್ಥಿ ರಾಜ್ಯೋತ್ಸವ ಪ್ರಶಸ್ತಿ ಹೊಡೆದರು!: ಪ್ರಶಸ್ತಿಗಳಿಗೆ ಎರಡು ಮುಖಗಳು ಇರುತ್ತವೆ. ಲಾಬಿ ಮಾಡಿ ಪಡೆಯುವುದೂ ನಿಜವೇ. ಆದರೆ ಇದಕ್ಕಾಗಿ ಹೆಚ್ಚು ವ್ಯಥೆ ಪಡುವ ಅಗತ್ಯವಿಲ್ಲ. ಲಾಬಿ ಮಾಡಿ ಪ್ರಶಸ್ತಿ ಪಡೆದ ಬಳಿಕ ಸಾಧನೆ ಮಾಡಿದವರೂ ಇದ್ದಾರೆ. ವೈಯ ಕ್ತಿಕವಾದ ನನ್ನದೇ ನಿದರ್ಶನ ಹೇಳುವುದಾದರೆ, ನನ ಗಿಂತ ಮೊದಲೇ ನನ್ನ ವಿದ್ಯಾರ್ಥಿಯೊಬ್ಬರು ರಾಜ್ಯೋ ತ್ಸವ ಪ್ರಶಸ್ತಿ `ಹೊಡೆದು’ಕೊಂಡು ಬಿಟ್ಟರು. ಇದಾಗಿ ಎಷ್ಟೋ ವರ್ಷಗಳ ಬಳಿಕ ನನಗೂ ಪ್ರಶಸ್ತಿ ಬಂತು. ಕೆಲವರು `ಪಡೆದರೆ, ಹಲವರು `ಹೊಡೆದು’ಕೊಳ್ಳುತ್ತಾರೆ. ಸದರಿ ವಿದ್ಯಾರ್ಥಿ ಭವಿಷ್ಯದಲ್ಲಿ ಸಾಧನೆ ಮಾಡಿದರು ಎಂಬುದು ಸಂತಸದ ವಿಚಾರ ಬಿಡಿ ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ನನಗೆ ಅಚ್ಚರಿ ಹಾಗೂ ಸಂತಸ ಎರಡೂ ಉಂಟಾಗಿದೆ. ಕಾರಣ ಮೈಸೂರಿನಲ್ಲೇ ಇಷ್ಟೊಂದು ಮಂದಿ ಪ್ರಶಸ್ತಿ ಪಡೆಯಲು ಯೋಗ್ಯರು ಇದ್ದಾರೆ ಎಂಬುದಾಗಿದೆ. ಬರವಣಿಗೆ ಮೂಲಕವೂ ಕನ್ನಡಕ್ಕಾಗಿ ಹೋರಾಟ ಮಾಡ ಬಹುದು. ಕುವೆಂಪು ಇದೇ ದಾರಿಯಲ್ಲಿ ಸಾಗಿದರು. ಬರ ವಣಿಗೆ ಜೊತೆಗೆ ಕನ್ನಡದ ಮೆರವಣಿಗೆಯೂ ಬೇಕಾಗುತ್ತದೆ. ಇಂದು ನಾವು ಸ್ವಾರ್ಥಿಗಳಾಗುತ್ತಿದ್ದೇವೆ ಅರ್ಥಾತ್ ಆತ್ಮ ಮುಖಿಗಳಾಗುತ್ತಿದ್ದೇವೆ. ಇದಕ್ಕೆ ಬದಲಾಗಿ ಸಮಾಜಮುಖಿ ಆಗುವುದೇ ಮುಖ್ಯವಾಗಬೇಕು. ಆತ್ಮಾನಂದರಾಗುವುದು ಬೇರೆ ವಿಷಯ ಎಂದು ಸಾಹಿತಿ ಸಿಪಿಕೆ ಹೇಳಿದರು.

Translate »