ನ.18, 19ರಂದು ಅಸಂಘಟಿತ ಕಾರ್ಮಿಕರ ದೆಹಲಿ ಚಲೋ
ಮೈಸೂರು

ನ.18, 19ರಂದು ಅಸಂಘಟಿತ ಕಾರ್ಮಿಕರ ದೆಹಲಿ ಚಲೋ

September 26, 2018

ಮೈಸೂರು:  ಕೇಂದ್ರ ಸರ್ಕಾರದ ತಪ್ಪು ನೀತಿಯಿಂದಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿದ್ದು, ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ದೊಡ್ಡ ಹೊಡೆತ ಬಿದ್ದಿದೆ. ಇದರ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ವತಿಯಿಂದ ನ.18 ಮತ್ತು 19ರಂದು ರಾಜ್ಯದ ಅಸಂಘಟಿತ ಕಾರ್ಮಿಕರ ದೆಹಲಿ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಡಾ.ಶಾಂತವೀರ ನಾಯಕ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದರ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾಕ್‍ನಲ್ಲಿ ಸಮಾವೇಶಗೊಂಡು, ಅಲ್ಲಿಂದ ದೆಹಲಿಗೆ ಹೊರಟು ಅಲ್ಲಿನ ಜಂತರ್ ಮಂತರ್ ಬಳಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.

ಇದಕ್ಕೂ ಮೊದಲು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಇಳಿಸಬೇಕು. ಅಸಂಘಟಿತ ಕಾಮಿಕರು, ಪ್ರಮುಖವಾಗಿ ಮನೆಗೆಲಸದವರ ರಕ್ಷಣೆಗೆ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಅಸಂಘಟಿತ ಕಾರ್ಮಿಕರು ಒತ್ತಾಯಿಸಿದ ಅಂಚೆ ಕಾರ್ಡ್‍ಗಳನ್ನು ಸಂಗ್ರಹಿಸಲಾಗುವುದು. ದೆಹಲಿಯ ಸಮಾವೇಶ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಕರೆಸಿ ಆ ಅಂಚೆ ಕಾರ್ಡ್‍ಗಳನ್ನು ಪ್ರಧಾನಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಭಾಗದ ಜಿಲ್ಲಾಧ್ಯಕ್ಷ ಶಿವಕುಮಾರ್, ಪ್ರದೀಪ್ ಇನ್ನಿತರರು ಉಪಸ್ಥಿತರಿದ್ದರು.

Translate »