ಚಾಮುಂಡಿಬೆಟ್ಟದ ತಪ್ಪಲಲ್ಲಿ ತಯಾರಿಕಾ ಘಟಕ ಪತ್ತೆ
ಮೈಸೂರು

ಚಾಮುಂಡಿಬೆಟ್ಟದ ತಪ್ಪಲಲ್ಲಿ ತಯಾರಿಕಾ ಘಟಕ ಪತ್ತೆ

December 17, 2021

ಮೈಸೂರು, ಡಿ.16(ಆರ್‍ಕೆ)- ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್)ದ, ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲೂ ವಿಶ್ವಾಸಾರ್ಹವಾಗಿರುವ `ನಂದಿನಿ’ ಬ್ರಾಂಡ್ ಅನ್ನೇ ಹೋಲುವಂತೆ ನಕಲಿ ತುಪ್ಪ ತಯಾರಿಕಾ ಘಟಕ ವೊಂದು ಚಾಮುಂಡಿಬೆಟ್ಟದ ತಪ್ಪಲಿನ ಹೊಸಹುಂಡಿ ಗ್ರಾಮದಲ್ಲಿ ಪತ್ತೆಯಾಗಿದೆ.
ಗ್ರಾಮದ ಹೊರವಲಯದ ಸರ್ವೇ ನಂ.84/6ರಲ್ಲಿ ನಿರ್ಮಿಸಿರುವ ಗೋಡೌನ್ ನಲ್ಲಿ ನಕಲಿ ತುಪ್ಪ ತಯಾರಿಕಾ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಈ ಘಟಕದಲ್ಲಿ ಮಹಿಳೆಯರೂ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದದ್ದು ಕಂಡು ಬಂದಿದೆ. ನಂದಿನಿ ಉತ್ಪನ್ನವೆಂದರೆ ವಿಶ್ವಾಸಾರ್ಹ ಉತ್ಪನ್ನ. ಸಾರ್ವಜನಿಕರು ಖಾಸಗಿ ಬ್ರಾಂಡ್ ಹಾಲಿನ ಉತ್ಪನ್ನಗಳು ಕಲಬೆರಕೆಯಾಗಿರುತ್ತವೆ ಎಂಬ ಕಾರಣಕ್ಕೆ ಬಹುತೇಕ ನಂದಿನಿ ಉತ್ಪನ್ನ ಗಳನ್ನೇ ಖರೀದಿಸುತ್ತಾರೆ. ಅದರಲ್ಲೂ ನಂದಿನಿ ತುಪ್ಪದ ಹಿರಿಮೆ ಎಂದರೆ ಈ ತುಪ್ಪವನ್ನು ತಿರುಪತಿ ದೇವಸ್ಥಾನದಲ್ಲಿ ಲಾಡು ತಯಾರಿಸಲು ಉಪಯೋಗಿಸಲಾಗುತ್ತದೆ. ಹೀಗಾಗಿ ನಂದಿನಿ ತುಪ್ಪ ಹೊರ ರಾಜ್ಯಗಳ ಜನರಿಗೂ ಕೂಡ ವಿಶ್ವಾಸಾರ್ಹವಾದುದೇ ಆಗಿದೆ.

ಇದನ್ನೇ ಬಂಡವಾಳ ಮಾಡಿಕೊಂಡ ಸಮಾಜಘಾತುಕರು ನಕಲಿ ತುಪ್ಪವನ್ನು `ನಂದಿನಿ’ ಬ್ರಾಂಡ್‍ನ ಸ್ಯಾಚೆಟ್ ಮತ್ತು ಟಿನ್‍ಗಳಲ್ಲಿ ತುಂಬಿ ಮಾರಾಟ ಮಾಡುವ ಮೂಲಕ ಹಣ ಗಳಿಸುವುದರ ಜೊತೆಗೆ ಹೆಸರಾಂತ ನಂದಿನಿ ಉತ್ಪನ್ನಗಳಿಗೂ ಕಳಂಕ ತಂದಿದ್ದಾರೆ. ಅದು ಮಾತ್ರವಲ್ಲದೇ ನಂದಿನಿ ಶುದ್ಧ ತುಪ್ಪವೆಂದು ಸೇವಿಸಿದವರ ಆರೋ ಗ್ಯದ ಜೊತೆಯೂ ಚೆಲ್ಲಾಟವಾಡಿದ್ದಾರೆ. ಹೊಸಹುಂಡಿಯ ಗೋಡೌನ್‍ನಲ್ಲಿ ಜುಲೈ ತಿಂಗಳಿಂದಲೂ ನಕಲಿ ತುಪ್ಪ ತಯಾರಿಕಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಈ ಘಟಕದಲ್ಲೇ ಸಾವಿರಾರು ಸಂಖ್ಯೆಯಲ್ಲಿ ನಂದಿನಿ ತುಪ್ಪದ ಸ್ಯಾಚೆಟ್‍ಗಳನ್ನು ತಯಾರಿಸಲಾಗು ತ್ತಿತ್ತು. ಹಾಗೂ ತುಪ್ಪವನ್ನು ಪ್ಯಾಕ್ ಮಾಡುವ ಯಂತ್ರವನ್ನು ಕೂಡ ಈ ಘಟಕದಲ್ಲಿ ಅಳ ವಡಿಸಲಾಗಿತ್ತು. ನಕಲಿ ತುಪ್ಪವನ್ನು ಸಾಗಾಣೆ ಮಾಡುವ ವಾಹನಗಳೂ ಕೂಡ ಗೋಡೌನ್ ಒಳಗೆ ನಿಂತಿದ್ದು ಕಂಡು ಬಂತು. ಈ ಗೋಡೌನ್‍ನಲ್ಲಿ ಅಲ್ಪ ಪ್ರಮಾಣದ ಅಸಲಿ ನಂದಿನಿ ತುಪ್ಪದ ಜೊತೆ ಭಾರೀ ಪ್ರಮಾಣದಲ್ಲಿ ಡಾಲ್ಡಾ (ವನಸ್ಪತಿ) ಸಂಗ್ರಹಿಸಿದ್ದು ಕಂಡು ಬಂತು. ಜೊತೆಗೆ ಪ್ಯಾಕ್ ಮಾಡಲ್ಪಟ್ಟ ನಕಲಿ ನಂದಿನಿ ತುಪ್ಪದ ಬಾಕ್ಸ್‍ಗಳು ಕೂಡ ಕಂಡು ಬಂದಿದೆ.

ನಕಲಿ ತುಪ್ಪದ ಘಟಕ ಪತ್ತೆ ಮಾಡಿದ ಎನ್‍ಜಿಓ: ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಕಾರ್ಯಕರ್ತರು ಇಂದು ಬೆಳಗ್ಗೆ ಹೊಸಹುಂಡಿ ಗ್ರಾಮದ ಗೋಡೌನ್ ಮೇಲೆ ದಾಳಿ ನಡೆಸಿದರು. ಈ ವೇಳೆ ಗೋಡೌನ್‍ನ ಶೆಟರ್ ಮುಚ್ಚಿತ್ತಾದರೂ ಈ ಗೋಡೌನ್‍ನಲ್ಲಿ ಅಕ್ರಮವಾಗಿ ಏನೋ ನಡೆಯುತ್ತಿದೆ ಎಂಬ ಸಂಶಯದ ಮೇರೆಗೆ ಅದರ ಬಾಗಿಲನ್ನು ತೆರೆಸಿ ಒಳ ಪ್ರವೇಶಿಸಿದಾಗ ನಕಲಿ ನಂದಿನಿ ತುಪ್ಪ ತಯಾರಿಸುತ್ತಿದ್ದದ್ದು ಕಂಡು ಬಂದಿದೆ. ಸಮಿತಿಯವರು ದಾಳಿ ನಡೆಸುತ್ತಲೇ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಹಲವರು ಸ್ಥಳದಿಂದ ಓಡಿ ಹೋದರೆ ಕೆಲವರನ್ನು ಹಿಡಿದಿಟ್ಟುಕೊಂಡ ಕಾರ್ಯಕರ್ತರು ಮೈಮುಲ್ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟಕದಲ್ಲಿ ಡಾಲ್ಡಾ ಜೊತೆ ಅಲ್ಪ ಪ್ರಮಾಣದಲ್ಲಿ ನಂದಿನಿ ತುಪ್ಪವನ್ನು ಮಿಶ್ರಣ ಮಾಡಿ ತುಂಬಿಟ್ಟಿದ್ದ 20 ಕೆಜಿಯ ಸಾವಿರಾರು ಟಿನ್‍ಗಳು ಇದ್ದವು. ಅದರ ಮೇಲೆ ಅಸಲಿ ನಂದಿನಿ ಬ್ರಾಂಡ್‍ನ ಸ್ಟಿಕ್ಕರ್ ಅಂಟಿಸಲಾಗಿತ್ತು. ಅಲ್ಲದೇ 500 ಗ್ರಾಂ ಮತ್ತು 1 ಕೆಜಿ ಕೆಎಂಎಫ್‍ನ ನಂದಿನಿ ಬ್ರಾಂಡ್ ಇರುವ ಸ್ಯಾಚೆಟ್‍ಗಳಲ್ಲಿ ತುಂಬಿ ಕೆಎಂಎಫ್ ಲಾಂಛನವಿರುವ ರಟ್ಟಿನ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ಇಡಲಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಮೈಮುಲ್‍ನ ನಿರ್ದೇಶಕ ವಿಜಯಕುಮಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ, ನಕಲಿ ತುಪ್ಪ ಘಟಕದಲ್ಲಿ ಅನುಮಾನವೇ ಬಾರದಂತೆ ನಂದಿನಿ ಬ್ರಾಂಡ್‍ನ ಸ್ಯಾಚೆಟ್‍ಗಳಲ್ಲಿ ನಕಲಿ ತುಪ್ಪವನ್ನು ಪ್ಯಾಕ್ ಮಾಡಿ ಇಟ್ಟಿರುವುದನ್ನು ನೋಡಿ ನಿಬ್ಬೆರಗಾದರು. ಕೆಎಂಎಫ್ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ(ಎಫ್‍ಸಿಐ) ಹಾಗೂ ಫುಡ್ ಸೇಫ್ಟಿ ಅಧಿಕಾರಿಗಳು ಮತ್ತು ಜಿಲ್ಲಾ ಎಸ್ಪಿ ಆರ್.ಚೇತನ್, ಅಡಿಷನಲ್ ಎಸ್ಪಿ ಶಿವಕುಮಾರ್ ಇನ್ನಿತರ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ನಂದಿನಿ ಬ್ರಾಂಡ್‍ನಲ್ಲಿ ಪ್ಯಾಕ್ ಮಾಡಿದ್ದ ಸಾವಿರಾರು ನಕಲಿ ತುಪ್ಪದ ಸ್ಯಾಚೆಟ್‍ಗಳು, ನಂದಿನಿ ಬ್ರಾಂಡ್‍ನ ಸ್ಯಾಚೆಟ್ ರೋಲ್‍ಗಳು, ತುಪ್ಪವನ್ನು ಪ್ಯಾಕ್ ಮಾಡುವ ಯಂತ್ರ ಹಾಗೂ ನಕಲಿ ತುಪ್ಪ ತಯಾರಿಕಾ ಉಪಕರಣಗಳನ್ನು ವಶಪಡಿಸಿಕೊಳ್ಳಲಾಯಿತು. ಪ್ರಾಥಮಿಕ ಮಾಹಿತಿಯಂತೆ ಅಲ್ಪ ಪ್ರಮಾಣದ ಅಸಲಿ ನಂದಿನಿ ತುಪ್ಪದ ಜೊತೆ ಡಾಲ್ಡಾ ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸಲಾಗುತ್ತಿತ್ತು. ಇದನ್ನು ಅಸಲಿ ನಂದಿನಿ ತುಪ್ಪವೆಂದೇ ಹಲವಾರು ಕಡೆ ಸರಬರಾಜು ಮಾಡಲಾಗುತ್ತಿತ್ತು. ರಾಜ್ಯ ಮತ್ತು ಹೊರರಾಜ್ಯದ ಸಗಟು ವ್ಯಾಪಾರಿಗಳಿಗೆ ನಕಲಿ ನಂದಿನಿ ತುಪ್ಪವನ್ನು ವ್ಯವಸ್ಥಿತವಾಗಿ ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಅಧಿಕಾರಿ ಗಳು ಭೇಟಿ ನೀಡಿದಾಗ ಇಬ್ಬರು ಪುರುಷರು ಹಾಗೂ 10 ಮಂದಿ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ಘಟಕವನ್ನು ಕೂಡ ವಶಕ್ಕೆ ಪಡೆದಿದ್ದಾರೆ.

ನಂದಿನಿ ಬ್ರಾಂಡ್ ಉತ್ಪನ್ನಗಳ ಅಧಿಕೃತ ಘಟಕ ಮೈಮುಲ್‍ಗೆ ಅನತಿ ದೂರದಲ್ಲೇ ನಂದಿನಿ ಬ್ರಾಂಡ್‍ನಂತೆ ನಕಲಿ ತಯಾರಿಕಾ ಘಟಕ ಕೆಲವು ತಿಂಗಳಿಂದ ರಾಜಾರೋಷ ದಿಂದ ಕಾರ್ಯ ನಿರ್ವಹಿಸುತ್ತಿದ್ದದ್ದು ಸಾರ್ವಜನಿಕರಿಗೆ ಆಘಾತವನ್ನುಂಟು ಮಾಡಿದೆ. ಅಸಲಿ ನಂದಿನಿ ತುಪ್ಪವನ್ನೇ ಸಂಶಯದಿಂದ ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರಿನಲ್ಲಿ ಇಂತಹ ಸಮಾಜಘಾತುಕ ಚಟುವಟಿಕೆ ಇತ್ತೀಚೆಗೆ ಯಾವುದೇ ಎಗ್ಗಿಲ್ಲದೇ ನಡೆಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ಮೈಸೂರು ಹೊರವಲಯದ ಮೈದಾನವನ್ನೇ ಕಸಾಯಿಖಾನೆ ಮಾಡಿಕೊಂಡು ಗೋ ಹತ್ಯೆ ನಡೆಸುತ್ತಿದ್ದರೂ ಸಂಬಂಧ ಪಟ್ಟವರ ವಿರುದ್ದ ಯಾವುದೇ ಕ್ರಮ ಕೈಗೊಂಡಂತೆ ಕಂಡು ಬರುತ್ತಿಲ್ಲ ಎಂದು ಹೇಳಲಾಗದು.

Translate »