ಆಟೋ ಹರಿಸಿ ವ್ಯಕ್ತಿ ಹತ್ಯೆಗೈದಿದ್ದ ಇಬ್ಬರ ಬಂಧನ
ಮೈಸೂರು

ಆಟೋ ಹರಿಸಿ ವ್ಯಕ್ತಿ ಹತ್ಯೆಗೈದಿದ್ದ ಇಬ್ಬರ ಬಂಧನ

January 14, 2021

ಹಣಕಾಸು ವಿಷಯದ ದ್ವೇಷವೇ ಕೊಲೆಗೆ ಕಾರಣ
ಮೈಸೂರು,ಜ.13(ಆರ್‍ಕೆ)-ರಸ್ತೆಬದಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು, ನಂತರ ಮೇಲಿಂದ ಮೇಲೆ ಆತನ ತಲೆ ಮೇಲೆ ಆಟೋ ಹರಿಸಿ ಘೋರ ರೀತಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಎನ್.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಬಿಎಂಶ್ರೀನಗರ ನಿವಾಸಿ ಶ್ರೀಧರ್ ಹಾಗೂ ಎನ್.ಆರ್. ಠಾಣಾ ವ್ಯಾಪ್ತಿಯ ಗೋವಿಂದರಾಜು ಬಂಧಿತ ಹತ್ಯೆ ಆರೋಪಿಗಳು. ಸಿಸಿ ಟಿವಿ ಕ್ಯಾಮರಾ ಫುಟೇಜಸ್‍ಗಳ ದೃಶ್ಯಾವಳಿಯ ಸುಳಿವಿನ ಜಾಡು ಹಿಡಿದ ಎನ್.ಆರ್. ಠಾಣೆ ಇನ್ಸ್‍ಪೆಕ್ಟರ್ ಅಜರುದ್ದೀನ್ ಮತ್ತು ತಂಡದ ಸಿಬ್ಬಂದಿ ಇಂದು ಬೆಳಿಗ್ಗೆ ಆರೋಪಿಗಳನ್ನು ವಶಕ್ಕೆ ಪಡೆದರು.

ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಕುಡಿದ ಮತ್ತಿನಲ್ಲಿ ಕಳೆದ ಒಂದು ವಾರದ ಹಿಂದೆ ಆಟೋ ಚಾಲಕನಾದ ಮಲ್ಲಿಕಾರ್ಜುನ ನೊಂದಿಗೆ ಆತನ ಸ್ನೇಹಿತ ಶ್ರೀಧರ್ ಜಗಳವಾಡಿದ್ದ ಎಂಬುದು ತಿಳಿದು ಬಂದಿದೆ. ಆಟೋ ಚಾಲಕರಾದ ಇಬ್ಬರೂ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದರಲ್ಲದೆ, ಎನ್.ಆರ್. ಠಾಣಾ ವ್ಯಾಪ್ತಿಯ ಆಟೋ ಸ್ಟ್ಯಾಂಡ್‍ನಲ್ಲಿ ಕೈಕೈ ಮಿಲಾಯಿಸಿದ್ದರು. ಆ ದ್ವೇಷದಿಂದ ಶ್ರೀಧರ್ ತನ್ನ ಮತ್ತೋರ್ವ ಸ್ನೇಹಿತ ಗೋವಿಂದರಾಜುನನ್ನು ಕರೆದು ಕೊಂಡು ಮಲ್ಲಿಕಾರ್ಜುನನನ್ನು ಹತ್ಯೆಗೈದಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ.

ಭಾನುವಾರ ಎನ್.ಆರ್. ಠಾಣಾ ಸರಹದ್ದಿನ ಕ್ರಾಸ್‍ವೊಂದರ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಮಲ್ಲಿಕಾರ್ಜುನನಿಗೆ ತನ್ನ ಬಾಡಿಗೆ ಆಟೋದಲ್ಲಿ ಡಿಕ್ಕಿ ಹೊಡೆದು, ಕೆಳ ಬಿದ್ದ ಮೇಲೆ ಹಿಂದಿನ ಚಕ್ರ ಹರಿಸಿ, ಮತ್ತೆ ವಾಪಸ್ ಬಂದು ಆತನ ತಲೆ ಮೇಲೆ ಹರಿಸಿ ಪರಾರಿಯಾಗಿದ್ದ. ಆ ವೇಳೆ ಆಟೋ ಹಿಂದಿನ ಸೀಟಿನಲ್ಲಿ ಗೋವಿಂದರಾಜು ಸಹ ಕುಳಿತಿದ್ದನಂತೆ. ಪ್ರಕರಣ ದಾಖಲಿಸಿಕೊಂಡಿರುವ ಎನ್.ಆರ್. ಠಾಣೆ ಪೊಲೀಸರು, ಕೊಲೆ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Translate »