ದೇವರಾಜ್, ಪ್ರಜ್ವಲ್ ದೇವರಾಜ್ ಆಸ್ಪತ್ರೆಯಿಂದ ಬಿಡುಗಡೆ
ಮೈಸೂರು

ದೇವರಾಜ್, ಪ್ರಜ್ವಲ್ ದೇವರಾಜ್ ಆಸ್ಪತ್ರೆಯಿಂದ ಬಿಡುಗಡೆ

September 26, 2018

ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನಟರಾದ ದೇವರಾಜ್ ಮತ್ತು ಪುತ್ರ ಪ್ರಜ್ವಲ್ ದೇವರಾಜ್ ಅವರು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ಸೋಮವಾರ ಮುಂಜಾನೆ ಮೈಸೂರಿನ ಜೆಎಸ್‍ಎಸ್ ಅರ್ಬನ್ ಹಾತ್ ಎದುರಿನ ರಿಂಗ್ ರಸ್ತೆ ತಿರುವಿನಲ್ಲಿ ಆಡಿ ಕ್ಯೂ-7 ಕಾರು ಮೀಡಿಯನ್‍ಗೆ ಡಿಕ್ಕಿ ಹೊಡೆದು, ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ನಟರಾದ ದರ್ಶನ್, ಹಿರಿಯ ನಟ ದೇವರಾಜ್, ಅವರ ಪುತ್ರ ಪ್ರಜ್ವಲ್ ದೇವರಾಜ್ ಹಾಗೂ ಆಂಟನಿ ರಾಯ್ ಗಾಯಗೊಂಡಿದ್ದರು.

ಸೋಮವಾರ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ದೇವರಾಜ್ ಮತ್ತು ಪ್ರಜ್ವಲ್ ಅವರನ್ನು ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಇಬ್ಬರು ನಟರನ್ನು ಇಂದು ಸಂಜೆ 4.45 ಗಂಟೆ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವರಾಜ್ ಅವರು, ನಿನ್ನೆಯಷ್ಟೇ ಕಾರು ಅಪಘಾತದಲ್ಲಿ ನಮಗೆ ಸಾಧಾರಣ ಗಾಯಗಳಾಗಿದ್ದವು. ವೈದ್ಯರು ಕಿರು ಶಸ್ತ್ರ ಚಿಕಿತ್ಸೆ ನಡೆಸಿದ್ದು, ಈಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಿದ್ದೇವೆ ಎಂದರು.

ಗಾಯಗೊಂಡಿದ್ದ ಪುತ್ರ ಪ್ರಜ್ವಲ್, ನಟ ದರ್ಶನ್ ಹಾಗೂ ಆಂಟನಿ ರಾಯ್ ಸಹ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಕಾಗಿಲ್ಲ. ದರ್ಶನ್ ಹಾಗೂ ಆಂಟನಿ ರಾಯ್ ಇನ್ನೂ 10 ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ದೇವರಾಜ್ ಹೇಳಿದರು.

ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆದ ಬಳಿಕ ದರ್ಶನ್ ಅವರು ಎಂದಿನಂತೆ ಸಿನಿಮಾ ಶೂಟಿಂಗ್‍ಗೆ ಹೋಗಬಹುದು. ಎಲ್ಲರೂ ಸೇಫ್ ಆಗಿದ್ದೇವೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಕೊಲಂಬಿಯಾ ಏಷಿಯಾ ಆಸ್ಪತ್ರೆ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಅವರು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ್ದು, ಇಂದು ಸಂಜೆ ದೇವರಾಜ್ ಮತ್ತು ಪುತ್ರ ಪ್ರಜ್ವಲ್ ಅವರನ್ನು ಡಿಸ್‍ಚಾರ್ಜ್ ಮಾಡಲಾಗಿದೆ ಎಂದರು.
ಆಂಟನಿ ರಾಯ್ ಅವರಿಗೆ ಇಂದು ಸಂಜೆ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ದರ್ಶನ್ ಅವರು ಇನ್ನೂ ಕೆಲ ದಿನಗಳವರೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಳ್ಳುವರು ಎಂದು ವೈದ್ಯರು ತಿಳಿಸಿದರು.

ನಟರು ಚಿಕಿತ್ಸೆ ಪಡೆಯುತ್ತಿರುವುದರಿಂದ ಆಸ್ಪತ್ರೆ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಅಭಿಮಾನಿಗಳನ್ನು ಒಳಗೆ ಬಿಡದಂತೆ ತಡೆಯಲಾಗುತ್ತಿದೆ. ಚಿತ್ರ ನಿರ್ಮಾಪಕರು, ಗಣ್ಯರು ಇಂದೂ ಆಸ್ಪತ್ರೆಗೆ ಭೇಟಿ ನೀಡಿ ದರ್ಶನ್ ಆರೋಗ್ಯ ವಿಚಾರಿಸಿದರು.

Translate »