ಸರ್ಕಾರಿ ಶಾಲೆಗಳ ಶೂ ಖರೀದಿಯಲ್ಲಿ ಭಾರೀ ಅವ್ಯವಹಾರ ಆರೋಪ, ತೀವ್ರ ಚರ್ಚೆ ತನಿಖೆ ನಡೆಸುವುದಾಗಿ ಸಿಇಓ ಭರವಸೆ
ಮೈಸೂರು

ಸರ್ಕಾರಿ ಶಾಲೆಗಳ ಶೂ ಖರೀದಿಯಲ್ಲಿ ಭಾರೀ ಅವ್ಯವಹಾರ ಆರೋಪ, ತೀವ್ರ ಚರ್ಚೆ ತನಿಖೆ ನಡೆಸುವುದಾಗಿ ಸಿಇಓ ಭರವಸೆ

September 26, 2018

ಮೈಸೂರು ಜಿಪಂ ಸಾಮಾನ್ಯ ಸಭೆ
ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನಾ ನಜೀರ್‍ಸಾಬ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ಕಾರಿ ಶಾಲೆಗಳ ಶೂ ಮತ್ತು ಸಾಕ್ಸ್ ಯೋಜನೆಯಡಿ ಶೂ ಖರೀದಿ ವಿಚಾರ ತೀವ್ರ ಚರ್ಚೆಗೆ ಕಾರಣವಾಯಿತು.

ಜಿಲ್ಲಾ ಪಂಚಾಯಿತಿಯ ಹಂಪಾಪುರ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಶೂ ಮತ್ತು ಸಾಕ್ಸ್ ಯೋಜನೆಯಡಿ ಶೂ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಜಿಪಂ ಸದಸ್ಯ ಎಸ್.ಶ್ರೀಕೃಷ್ಣ ಗಂಭೀರವಾಗಿ ಆರೋಪಿಸಿ, ಸಭೆಯ ಗಮನ ಸೆಳೆದರು.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‍ಗಳನ್ನು ಉಚಿತವಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಮುಖಾಂತರ ಖರೀದಿಸಿ ವಿತರಿಸಬೇಕು ಎಂದು ಸರ್ಕಾರಿ ಆದೇಶದಲ್ಲಿ ಸೂಚಿಸಲಾಗಿದೆ. ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಸ್ಥಳೀಯವಾಗಿ ಖರೀದಿಸಿ ವಿತರಿಸುವ ಜವಾಬ್ದಾರಿಯನ್ನೂ ಸಮಿತಿಗಳಿಗೆ ವಹಿಸಲಾಗಿದೆ.

ಆದರೆ, ಹಂಪಾಪುರ ವ್ಯಾಪ್ತಿಯಲ್ಲಿ ಸುಮಾರು 50 ಶಾಲೆಗಳಿದ್ದು, ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಶೂಗಳನ್ನು ವಿತರಿಸಲಾಗಿದ್ದು, ಸ್ಥಳೀಯವಾಗಿ ಶೂಗಳನ್ನು ಖರೀದಿಸದೇ ಬೆಂಗಳೂರಿನ ಜಯನಗರದಿಂದ ತರಿಸಿಕೊಂಡ ಗುಮಾನಿಯಿದೆ. ಶೂ ಕವರ್‍ನಲ್ಲಿ ಶೂ ತಯಾರಾದ ಹಾಗೂ ಬಾಳಿಕೆ ದಿನಾಂಕವನ್ನು ನಮೂದಿಸಿಲ್ಲ. ಈ ಬೆಳವಣಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಎರಡು ಮೂರು ತಿಂಗಳೊಳಗೆ ಕಿತ್ತು ಹೋಗುವ ಶೂಗಳ ಬಗ್ಗೆ ದೂರುಗಳಿವೆ. ಈ ವಿಚಾರವನ್ನು ಶಿಕ್ಷಕರೇ ನಮ್ಮ ಗಮನಕ್ಕೆ ತಂದಿದ್ದಾರೆ. ಇದು ಕೇವಲ ಹಂಪಾಪುರ ಕ್ಷೇತ್ರವಷ್ಟೇ ಅಲ್ಲದೆ, ಮೈಸೂರು ಜಿಲ್ಲೆಯಾದ್ಯಂತ ಕೇಳಿ ಬಂದಿರುವ ದೂರು. ಇದು ಗಂಭೀರ ವಿಚಾರವಾದ್ದರಿಂದ ನಾಳೆಯಿಂದಲೇ ತನಿಖೆ ಆರಂಬಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಇವರ ಮಾತಿಗೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ, ಈ ಸಂಬಂಧ ಮೂರು ದಿನಗಳಲ್ಲಿ ಸಾಧ್ಯವಾದಷ್ಟು ಶಾಲೆಗಳಿಗೆ ಭೇಟಿ ನೀಡಿ ತನಿಖೆ ನಡೆಸಲಾಗುವುದು. ಸಮಿತಿ ನೀಡುವ ವರದಿಯನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು. ಜಿಪಂ ಉಪಾಧ್ಯಕ್ಷ ಜಿ.ನಟರಾಜ್ ಉಪಸ್ಥಿತರಿದ್ದರು.

Translate »