ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ : ಮತ್ತೆ ಜೆಡಿಎಸ್-ಬಿಜೆಪಿ ದೋಸ್ತಿ
ಮೈಸೂರು

ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ : ಮತ್ತೆ ಜೆಡಿಎಸ್-ಬಿಜೆಪಿ ದೋಸ್ತಿ

February 22, 2019

ಮೈಸೂರು: ತೆರವಾಗಿರುವ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಫೆ.23ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಕಸರತ್ತಿನ ನಡುವೆಯೂ ಜೆಡಿಎಸ್ ಹಾಗೂ ಬಿಜೆಪಿ ದೋಸ್ತಿ ಮುಂದುವರಿಯುವುದು ಖಚಿತವಾಗಿದೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹ ಹಾಗೂ ಖಾಸಗಿ ಹೋಟೆಲ್‍ನಲ್ಲಿ 2 ಸಭೆ ನಡೆಸಿದ ಜೆಡಿಎಸ್ ನಾಯಕರು, ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸುವ ನಿರ್ಧಾರಕ್ಕೆ ಬಂದಿ ದ್ದಾರೆ. ರಾಜ್ಯದ ದೋಸ್ತಿ ಕಾಂಗ್ರೆಸ್, ಜಿಪಂನಲ್ಲೂ ಜೆಡಿಎಸ್ ಸಖ್ಯ ಬೆಳೆಸಲು ಕಸರತ್ತು ನಡೆಸಿತ್ತು. ಆದರೆ ಈ ಬಗ್ಗೆ ಜೆಡಿಎಸ್ ಸದಸ್ಯರಲ್ಲಿ ಅಸಮಾಧಾನವಿತ್ತು. ಹಾಗಾಗಿ ಬಿಜೆಪಿ ಮೈತ್ರಿಯೇ ಒಳ್ಳೆಯದೆಂಬ ಆಗ್ರಹಪೂರ್ವಕ ಅಭಿಪ್ರಾಯವನ್ನು ಹೊರ ಹಾಕಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ಅವಲೋಕಿಸಿದ ಜೆಡಿಎಸ್ ನಾಯಕರು ಸಭೆ ಕರೆದು ಚರ್ಚಿಸಲು ತೀರ್ಮಾನಿ ಸಿದ್ದರು. ಹಾಗೆಯೇ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾ ಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಜಲದರ್ಶಿನಿ ಅತಿಥಿ ಗೃಹದಲ್ಲಿ ಜಿಪಂ ಜೆಡಿಎಸ್ ಸದಸ್ಯರ ಸಭೆ ಕರೆದು, ಅಭಿಪ್ರಾಯ ಸಂಗ್ರಹಿಸಿದರು. ಎಲ್ಲಾ ಸದಸ್ಯರೂ ಬಿಜೆಪಿ ದೋಸ್ತಿಯನ್ನೇ ನೆಚ್ಚಿ ಮಾತನಾಡಿದ್ದರಿಂದ ಖಾಸಗಿ ಹೋಟೆಲ್‍ನಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಿ, ಅಂತಿಮವಾಗಿ ಹಳೇ ಮೈತ್ರಿ ಮುಂದುವರಿಸಲು ತೀರ್ಮಾನಿಸಿದ್ದಾರೆ.

ಅಧ್ಯಕ್ಷ ಸ್ಥಾನ ಬಿಸಿಎಂ(ಎ) ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಜೆಡಿಎಸ್‍ನ ಬಿ.ಸಿ.ಪರಿಮಳ ಶ್ಯಾಮ್ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ. ಹಿಂದಿನ ಬಾರಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್‍ನ ನಯೀಮಾ ಸುಲ್ತಾನಾ, ಉಪಾಧ್ಯಕ್ಷರಾಗಿ ಬಿಜೆಪಿಯ ಜಿ.ನಟ ರಾಜ್ ಅಧಿಕಾರ ಹಂಚಿಕೊಂಡಿದ್ದರು. ಅವರಿಬ್ಬರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ 2 ಬಾರಿ ಚುನಾವಣೆ ನಿಗದಿಯಾಗಿ, ಮುಂದೂಡಲ್ಪಟ್ಟಿತ್ತು. ಈ ನಡುವೆ ಜೆಡಿಎಸ್‍ನ ಸಾ.ರಾ.ನಂದೀಶ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಫೆ.23ರ ಮಹೂರ್ತ ಅಂತಿಮವಾಗಿದೆ. ಜೆಡಿಎಸ್-ಬಿಜೆಪಿ ಮತ್ತೊಮ್ಮೆ ಮೈತ್ರಿ ಸಾಧಿಸುವ ನಿರ್ಧಾರಕ್ಕೆ ಬರಲಾಗಿದ್ದರೂ ಇತ್ತ ಬಿಜೆಪಿಯನ್ನು ಹೊರಗಿಟ್ಟು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್ ಪ್ರಯತ್ನ ಮುಂದುವರೆದಿದೆ. ಹಾಗಾಗಿ ಜೆಡಿಎಸ್‍ನ ಎಲ್ಲಾ ಸದಸ್ಯರು ಇಂದು ರಾತ್ರಿ ಅಥವಾ ನಾಳೆ(ಫೆ.22) ಬೆಳಿಗ್ಗೆ ರೆಸಾರ್ಟ್‍ಗೆ ತೆರಳಿ, ಚುನಾವಣೆ ದಿನದಂದು ನೇರವಾಗಿ ಜಿಪಂ ಸಭಾಂಗಣದಲ್ಲಿ ಹಾಜರಾಗಲಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. ಬೆಂಗಳೂರು ಬಿಬಿಎಂಪಿ ಹಾಗೂ ಮೈಸೂರು ನಗರಪಾಲಿಕೆಯಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧಿಸಿದೆ. ಅದೇ ರೀತಿ ಮೈಸೂರು ಜಿಪಂನಲ್ಲಿಯೂ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಯತ್ನಿಸಿತ್ತು.

ಸಮನ್ವಯ ಸಮಿತಿಯ ಅಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರದಲ್ಲಿ ಮೈಸೂರು ಜಿಪಂನಲ್ಲಿ ಅಧಿಕಾರ ಹಿಡಿಯಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಇದನ್ನು ಪುಷ್ಠೀಕರಿಸುವಂತೆ ಸಂಸದ ಆರ್.ಧ್ರುವನಾರಾಯಣ್ ಅವರು ನಿನ್ನೆ ಜಿಪಂ ಸದಸ್ಯರು ಮತ್ತು ಪಕ್ಷದ ಹಿರಿಯ ಮುಖಂಡರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ, ಸಿದ್ದರಾಮಯ್ಯರಿಗೆ ವರದಿ ಸಲ್ಲಿಸಿದ್ದಾರೆ. ಮೈತ್ರಿ ಸಾಧನೆಗಾಗಿ ಕಾಂಗ್ರೆಸ್ ಮುಖಂಡರು ಜೆಡಿಎಸ್‍ನ ಬೆನ್ನಿಗೆ ಬಿದ್ದಿದ್ದರು. ಆದರೆ ಕಾಂಗ್ರೆಸ್ ಜೊತೆಗಿಂತ ಬಿಜೆಪಿಯೊಂದಿಗಿನ ಮೈತ್ರಿಯೇ ಲೇಸು ಎಂಬ ಧೋರಣೆ ಜೆಡಿಎಸ್ ಸದಸ್ಯರಲ್ಲಿತ್ತು. ಇದನ್ನೇ ಸಚಿವ ಸಾ.ರಾ.ಮಹೇಶ್ ಕೂಡ ಸೂಚ್ಯವಾಗಿ ಹೇಳಿದ್ದರು. ಆದರೆ ಸಾ.ರಾ.ಮಹೇಶ್ ಅವರ ಅಭಿಪ್ರಾಯವನ್ನು ಸಂಸದ ಆರ್.ಧ್ರುವನಾರಾಯಣ್ ತಳ್ಳಿ ಹಾಕಿದ್ದರು. ಇಂತದೇ ಮಾತನ್ನು ಸಾ.ರಾ. ಮಹೇಶ್ ಅವರು ಮೈಸೂರು ನಗರಪಾಲಿಕೆ ಚುನಾವಣೆ ಸಂದರ್ಭದಲ್ಲೂ ಹೇಳಿದ್ದರು. ಕೊನೆಗೆ ನಮ್ಮ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಪಾಲಿಕೆ ಆಡಳಿತ ಹಿಡಿದಿದ್ದೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿದ್ದೇವೆ. ಅದೇ ಪ್ರಯತ್ನ ಈ ಬಾರಿ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿಯೂ ಆಗುವ ಸಾಧ್ಯತೆಗಳೇ ನಿಚ್ಚಳವಾಗಿದೆ ಎಂದಿದ್ದರು. ಸಿಎಂ ಕುಮಾರಸ್ವಾಮಿ ಅವರು ಕುಂಭಮೇಳಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಇದನ್ನು ಸ್ಥಳೀಯ ಮುಖಂಡರೇ ನೋಡಿಕೊಳ್ಳು ತ್ತಾರೆ ಎಂದಿದ್ದರು. ಅದರಂತೆ ಸ್ಥಳೀಯ ನಾಯಕರೂ ಆದ ಸಚಿವದ್ವಯರು, ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಹಳೇ ದೋಸ್ತಿಗೆ ಜೈ ಎಂದಿದ್ದಾರೆ. ಚುನಾವಣೆಗೆ ಒಂದು ದಿನ ಬಾಕಿಯಿದ್ದು, ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಿದೆ.

Translate »