ರಸ್ತೆಬದಿ ಶೌಚಾಲಯಕ್ಕೆ ಕಾರು ಡಿಕ್ಕಿ:ನಾಲ್ವರು ಸಾವು
ಮೈಸೂರು

ರಸ್ತೆಬದಿ ಶೌಚಾಲಯಕ್ಕೆ ಕಾರು ಡಿಕ್ಕಿ:ನಾಲ್ವರು ಸಾವು

February 22, 2019

ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀ ವೇಗವಾಗಿ ಚಲಿಸಿದ ಕಾರು ರಸ್ತೆ ಬದಿಯ ಸೇಫ್ಟಿ ಗಾರ್ಡ್ ಮತ್ತು ತಾತ್ಕಾಲಿಕ ಶೌಚಾಲಯಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿ ಕುಟುಂಬದ ನಾಲ್ವರು ಸಜೀವ ದಹನವಾದ ಹೃದಯವಿದ್ರಾವಕ ಘಟನೆ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.

ಬೆಂಗಳೂರು ಮೂಲದ ಖಾಸಗಿ ಕಂಪನಿಯೊಂದರ ಉದ್ಯೋಗಿ, ವಿವೇಕ್ ನಾಯಕ್ (45) ಅವರ ಪತ್ನಿ ರೇಷ್ಮಾ(38), ಪುತ್ರಿ ವಿನಂತಿ ನಾಯಕ್(10), ಪುತ್ರ ವಿಘ್ನೇಶ್ ನಾಯಕ್(4) ಅಪಘಾತದಲ್ಲಿ ಮೃತಪಟ್ಟವರು.

ವಿವರ: ವಿವೇಕ್ ನಾಯಕ್ ಅವರ ತಂದೆಯ ವರ್ಷದ ಪುಣ್ಯ ತಿಥಿ ನಾಳೆ (ಫೆ.22) ಅವರ ಸ್ವಗ್ರಾಮ ಕುಂದಾಪುರದಲ್ಲಿ ನಡೆಯಲಿತ್ತು. ಅದಕ್ಕಾಗಿ ಅವರು ಇಂದು ಬೆಳಿಗ್ಗೆ 5.30ರ ಸುಮಾರಿನಲ್ಲಿ ತಮ್ಮ ಸುಜುಕಿ ರಿಟ್ಜ್ ಕಾರಿನಲ್ಲಿ (ಕೆಎ 01 ಎಂಎಲ್ 2155) ಕುಟುಂಬ ಸಮೇತ ಕುಂದಾಪುರದತ್ತ ಹೊರಟಿದ್ದರು. ಇಂದು ಬೆಳಿಗ್ಗೆ 7.30ರ ಸುಮಾರಿನಲ್ಲಿ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಬಳಿ ಅತೀ ವೇಗವಾಗಿ ಚಲಿಸುತ್ತಿದ್ದ ಇವರ ಕಾರು ಮೊದಲಿಗೆ ರಾಷ್ಟ್ರೀಯ ಹೆದ್ದಾರಿಯ ಸೇಫ್ಟಿ ಗಾರ್ಡ್‍ಗೆ ಟಚ್ ಆಗಿ ರಸ್ತೆ ಬದಿ ಇದ್ದ ತಾತ್ಕಾಲಿಕ ಶೌಚಾಲಯಕ್ಕೆ ಡಿಕ್ಕಿ ಹೊಡೆದಿದೆ. ಅದೇ ವೇಳೆ ಕಾರಿನ ಎಂಜಿನ್‍ನಲ್ಲಿ ಬೆಂಕಿ ಹೊತ್ತಿಕೊಂಡು ಕಾರು ಧಗಧಗನೆ ಉರಿಯಲಾರಂಭಿಸಿದೆ.

ಕಾರಿನ ಏರ್‍ಬ್ಯಾಗ್‍ಗಳು ಓಪನ್ ಆದರೂ ಸಹ ಕಾರು ಜಖಂಗೊಂಡಿದ್ದರಿಂದ ಒಳಗಿದ್ದವರು ಬಾಗಿಲು ತೆರೆದು ಹೊರಗೆ ಬರಲಾಗದೇ ಸ್ಥಳದಲ್ಲೇ ವಿಘ್ನೇಶ್ ನಾಯಕ್ ಹೊರತುಪಡಿಸಿ ಉಳಿದ ಮೂವರು ಸಜೀವ ದಹನವಾಗಿದ್ದಾರೆ. ಗ್ರಾಮಸ್ಥರು ನೆರವಿಗೆ ಬಂದರಾದರೂ ಯಾರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಬಾಲಕ ವಿಘ್ನೇಶ್ ನಾಯಕ್ ನನ್ನು ಹ್ಯಾಗೋ ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಆತನು ಕೊನೆಯುಸಿರೆಳೆದಿದ್ದಾನೆ.

ಕಾರಿನ ಸ್ಪೀಡೋ ಮೀಟರ್ 140 ಕಿ.ಮೀ.ಗಳಿಗೆ ಸ್ಥಗಿತಗೊಂಡಿದ್ದು, ಈ ಕಾರು 140 ಕ್ಕಿಂತ ಹೆಚ್ಚು ಕಿ.ಮೀ. ವೇಗದಲ್ಲಿ ಚಲಿಸಿರಬಹುದು. ವಿವೇಕ್ ನಾಯಕ್ ಅವರು ಬೆಂಗಳೂರಿನ ತಮ್ಮ ಅಪಾರ್ಟ್‍ಮೆಂಟ್‍ನಿಂದ ಬೆಳಿಗ್ಗೆ 5.30ಕ್ಕೆ ಹೊರಟಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾದರೆ ಅವರು ಸುಮಾರು 4.30ಕ್ಕೆ ಎದ್ದಿರಬಹುದು. ವೇಗವಾಗಿ ಕಾರನ್ನು ಚಾಲನೆ ಮಾಡುತ್ತಿದ್ದ ಅವರು ನಿದ್ರೆಯ ಮಂಪರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಸೇಫ್ಟಿ ಗಾರ್ಡ್‍ಗೆ ಕಾರನ್ನು ಡಿಕ್ಕಿ ಪಡಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸಂಬಂಧ ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಪ್ರಕಾಶ್ ಗೌಡ, ಡಿವೈಎಸ್ಪಿ ಲಕ್ಷ್ಮೇಗೌಡ, ಸರ್ಕಲ್ ಇನ್ಸ್‍ಪೆಕ್ಟರ್ ಕಾಂತರಾಜು, ಸಬ್ ಇನ್ಸ್‍ಪೆಕ್ಟರ್ ಭವಿತ ಮತ್ತು ಚನ್ನರಾಯಪಟ್ಟಣ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಮತ್ತೊಂದು ಪ್ರಕರಣ: ಇನ್ನೋವಾ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ನಡೆದಿದೆ.

ಬೆಂಗಳೂರು ಮೂಲದ ಮಧುರಾವ್(35) ಮೃತಪಟ್ಟವರು. ಸ್ನೇಹಿತನ ಮದುವೆಗಾಗಿ ಇನ್ನೋವಾ ಕಾರಿನಲ್ಲಿ ಮಧುರಾವ್ ಸೇರಿದಂತೆ ಮೂವರು ಸ್ನೇಹಿತರು ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದಾಗ ಶೆಟ್ಟಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎದುರಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಹಲ್ಲೆ

Translate »